ಹಳೆಯ ಒಡಂಬಡಿಕೆKNCL

ಪ್ರವಾದಿ ಯೆಜೆಕಿಯೇಲನ ಗ್ರಂಥ 29

1ಹತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹನ್ನೆರಡನೆಯ ದಿನದಲ್ಲಿ ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು:

2“ನರಪುತ್ರನೇ, ನೀನು ಈಜಿಪ್ಟಿನ ಅರಸ ಫರೋಹನ ಕಡೆಗೆ ಮುಖಮಾಡಿ ಅವನನ್ನು ಹಾಗು ಈಜಿಪ್ಟಿನವರೆಲ್ಲರನ್ನು ಕುರಿತು ಹೀಗೆ ನುಡಿ -

3ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಈಜಿಪ್ಟಿನ ಅರಸ ಫರೋಹನೇ, ನದೀಶಾಖೆಗಳ ನಡುವೆ ಒರಗಿಕೊಂಡು ‘ಈ ನದಿ ನನ್ನದೇ. ನನಗಾಗಿಯೇ ಮಾಡಿಕೊಂಡಿದ್ದೇನೆ’ ಎಂದುಕೊಳ್ಳುವ ದೊಡ್ಡ ಮೊಸಳೆ ನೀನು. ಇಗೋ, ನಾನು ನಿನಗೆ ವಿರುದ್ಧನಾಗಿದ್ದೇನೆ.

4ನಾನು ನಿನ್ನ ದವಡೆಗಳಿಗೆ ಗಾಳಹಾಕುವೆನು; ನಿನ್ನ ನದಿಯ ಮೀನುಗಳು ನಿನ್ನ ಬೆನ್ನು ಚಿಪ್ಪುಗಳಿಗೆ ಅಂಟಿಕೊಳ್ಳುವಂತೆ ಮಾಡುವೆನು. ಅಂಟಿಕೊಂಡಿರುವ ಆ ಮೀನುಗಳ ಸಹಿತ ನಿನ್ನನ್ನು ನಿನ್ನ ನದಿಯ ಮಧ್ಯೆಯಿಂದ ಈಚೆಗೆ ಎಳೆಯುವೆನು.

5ನಿನ್ನನ್ನೂ ನಿನ್ನ ಎಲ್ಲ ಮೀನುಗಳನ್ನೂ ಕಾಡುಪಾಲು ಮಾಡುವೆನು; ನೀನು ಬಯಲಿನಲ್ಲಿ ಬಿದ್ದಿರುವೆ; ನಿನ್ನನ್ನು ಯಾರೂ ಹೊರರು, ಹೂಣಿಡರು; ನಿನ್ನನ್ನು ಭೂಜಂತುಗಳಿಗೂ ಆಕಾಶದ ಪಕ್ಷಿಗಳಿಗೂ ಆಹಾರ ಮಾಡಿದ್ದೇನೆ.

6“ಆಗ ಈಜಿಪ್ಟಿನ ಸಕಲ ನಿವಾಸಿಗಳು, ‘ಇಸ್ರಯೇಲ್ ವಂಶದವರಿಗೆ ನಾವು ಬರೀ ದಂಟಿನ ಊರುಗೋಲಾದೆವು’ ಎಂದು ನಾಚಿಕೆಪಟ್ಟು ನಾನೇ ಸರ್ವೇಶ್ವರ ಎಂಬುದಾಗಿ ದೃಢಮಾಡಿಕೊಳ್ಳುವರು.

7ಈಜಿಪ್ಟೇ, ಇಸ್ರಯೇಲರು ನಿನ್ನ ಮೇಲೆ ಕೈಯಿಡಲು, ನೀನು ಅವರನ್ನು ಮುರಿದು ಅವರೆಲ್ಲರ ಹೆಗಲನ್ನು ಚುಚ್ಚಿದೆ; ನಿನ್ನ ಮೇಲೆ ಊರಿಕೊಳ್ಳಲು, ನೀನು ಒಡೆದು ಅವರೆಲ್ಲರ ನಡುವಿಗೆ ನಡುಕವನ್ನು ಉಂಟುಮಾಡಿದೆ.

8ಹೀಗಿರಲು, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಇಗೋ, ನಾನು ನಿನ್ನ ಮೇಲೆ ಖಡ್ಗವನ್ನು ಬರಮಾಡಿ ಜನರನ್ನೂ ಜಾನುವಾರುಗಳನ್ನೂ ನಿನ್ನಿಂದ ನಿರ್ಮೂಲಮಾಡುವೆನು.

9ಫರೋಹನು, - ‘ಈ ನದಿ ನನ್ನದೇ, ನಾನೇ ಮಾಡಿಕೊಂಡೆ’ ಎಂದುಕೊಂಡನು. ಈ ಕಾರಣ ಈಜಿಪ್ಟ್ ದೇಶ ಹಾಳುಪಾಳಾಗುವುದು; ಆಗ ನಾನೇ ಸರ್ವೇಶ್ವರ ಎಂದು ಅವರಿಗೆ ಗೊತ್ತಾಗುವುದು.

10ಇಗೋ, ನಾನು ನಿನಗೂ ನಿನ್ನ ನದಿಗೂ ವಿರುದ್ಧನಾಗಿ ಈಜಿಪ್ಟ್ ದೇಶವನ್ನು ಮಿಗ್ದೋಲಿನಿಂದ ಸೆವೇನೆಯ ತನಕ, ಹೌದು, ಸುಡಾನ್ ಎಲ್ಲೆಯವರೆಗೂ ಪೂರ್ತಿಯಾಗಿ ಹಾಳುಪಾಳುಮಾಡುವೆನು.

11ಯಾವ ವ್ಯಕ್ತಿಯೂ ಅಲ್ಲಿ ಹೆಜ್ಜೆಯಿಟ್ಟು ಹಾದುಹೋಗನು; ನಲವತ್ತು ವರ್ಷ ನಿರ್ಜನವಾಗಿರುವುದು.

12ಹಾಳುಬಿದ್ದಿರುವ ದೇಶಗಳೊಳಗೆ ಈಜಿಪ್ಟ್ ದೇಶವನ್ನೂ ಹಾಳು ಬೀಳಿಸುವೆನು; ಪಾಳುಬಿದ್ದಿರುವ ಪಟ್ಟಣಗಳೊಳಗೆ ಅದರ ಪಟ್ಟಣಗಳನ್ನೂ ಪಾಳುಬೀಳಿಸುವೆನು; ನಲವತ್ತು ವರ್ಷ ಹಾಗೆಯೇ ಇರುವುವು; ನಾನು ಈಜಿಪ್ಟಿನವರನ್ನು ಜನಾಂಗಗಳಲ್ಲಿ ಚದರಿಸ, ದೇಶವಿದೇಶಗಳಿಗೆ ತೂರಿಬಿಡುವೆನು.

13ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಲವತ್ತು ವರ್ಷಗಳ ಮೇಲೆ ನಾನು

14ಈಜಿಪ್ಟಿನ ದುರವಸ್ಥೆಯನ್ನು ತಪ್ಪಿಸಿ, ಅವರ ಜನ್ಮಭೂಮಿಯಾದ ದಕ್ಷಿಣ ಈಜಿಪ್ಟಿಗೆ ಪುನಃ ಬರಮಾಡುವೆನು. ಅಲ್ಲೇ ಅವರು ನಿಕೃಷ್ಟ ರಾಜ್ಯದವರಾಗಿರುವರು.

15ಆ ರಾಜ್ಯ ಸಮಸ್ತ ರಾಜ್ಯಗಳಲ್ಲಿ ಕನಿಷ್ಟವೆನಿಸಿಕೊಳ್ಳುವುದು; ಮಿಕ್ಕ ಜನಾಂಗಗಳಿಗಿಂತ ತಾನು ದೊಡ್ಡದೆಂದು ಅದು ಇನ್ನು ತಲೆಯೆತ್ತದು; ಆ ಜನಾಂಗಗಳ ಮೇಲೆ ಇನ್ನು ದೊರೆತನ ಮಾಡಲಾರದಂತೆ ನಾನು ಅದನ್ನು ಕ್ಷೀಣಗತಿಗೆ ತರುವೆನು.

16ಈಜಿಪ್ಟ್ ಇನ್ನು ಇಸ್ರಯೇಲ್ ವಂಶದವರ ಭರವಸೆಯಾಗದು; ಅದರ ಕಡೆಗೆ ಕಣ್ಣೆತ್ತುವಾಗ ದೇವದ್ರೋಹದ ನೆನಪು ಇಸ್ರಯೇಲರಲ್ಲಿ ಹುಟ್ಟುವುದು; ನಾನೇ ಸರ್ವೇಶ್ವರ ಎಂದು ಅವರಿಗೆ ಮನದಟ್ಟಾಗುವುದು.”

17ಇಪ್ಪತ್ತೇಳನೆಯ ವರ್ಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು -

18“ನರಪುತ್ರನೇ, ಬಾಬಿಲೋನಿನ ನೆಬೂಕದ್ನೆಚ್ಚರನು ಟೈರಿಗೆ ಮುತ್ತಿಗೆ ಹಾಕಿ, ತನ್ನ ಸೈನಿಕರಿಂದ ಬಹು ಶ್ರಮದ ಸೇವೆಯನ್ನು ಮಾಡಿಸಿದ್ದಾನೆ; ಪ್ರತಿಯೊಬ್ಬನ ತಲೆ ಬೋಳಾಗಿದೆ. ಪ್ರತಿಯೊಬ್ಬನ ಹೆಗಲು ಕಾಯಿಕಟ್ಟಿದೆ; ಆದರೂ ಆ ಮುತ್ತಿಗೆಯಲ್ಲಿ ಅವನು ಪಟ್ಟ ಶ್ರಮಕ್ಕೆ ಅವನಿಗಾಗಲಿ ಅವನ ಸೈನಿಕರಿಗಾಗಲಿ ಟೈರಿನಿಂದ ಫಲವೇನೂ ಸಿಕ್ಕಲಿಲ್ಲ.

19ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಇಗೋ, ನಾನು ಬಾಬಿಲೋನಿನ ಅರಸ ನೆಬೂಕದ್ನೆಚ್ಚರನಿಗೆ ಈಜಿಪ್ಟ್ ದೇಶವನ್ನು ಕೊಡುವೆನು; ಅವನು ಅದರ ಜನರನ್ನೂ ಆಸ್ತಿಪಾಸ್ತಿಯನ್ನೂ ಒಯ್ದು, ಆ ದೇಶವನ್ನು ಸೂರೆಮಾಡಿ ಕೊಳ್ಳೆಹೊಡೆಯುವನು; ಅದೇ ಅವನ ಸೈನ್ಯಕ್ಕೆ ಸಿಕ್ಕುವ ಸಂಬಳ.

20ಅವನು ಸೈನ್ಯಸಮೇತ ನನ್ನ ಪರವಾಗಿ ಸೇವೆಮಾಡಿದ್ದರಿಂದ ಅವನು ಪಟ್ಟ ಶ್ರಮಕ್ಕೆ ಪ್ರತಿಫಲವಾಗಿ ನಾನು ಈಜಿಪ್ಟ್ ದೇಶವನ್ನು ಅವನಿಗೆ ಕೊಟ್ಟಿದ್ದೇನೆ; ಇದು ಸರ್ವೇಶ್ವರನಾದ ದೇವರ ನುಡಿ.

21“ಆ ದಿನದಲ್ಲಿ ನಾನು ಇಸ್ರಯೇಲ್ ವಂಶಕ್ಕೆ ಕೋಡುಮೂಡಿಸಿ ಆ ವಂಶದವರ ಮಧ್ಯೆ ನಿನ್ನ ಬಾಯನ್ನು ಬಿಚ್ಚುವೆನು; ನಾನೇ ಸರ್ವೇಶ್ವರ ಎಂದು ಅವರಿಗೆ ಖಚಿತವಾಗುವುದು.