ಹಳೆಯ ಒಡಂಬಡಿಕೆKNCL

ಪ್ರವಾದಿ ಯೆಜೆಕಿಯೇಲನ ಗ್ರಂಥ 15

1ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ ಇದು:

2“ನರಪುತ್ರನೇ, ವನವೃಕ್ಷಗಳಲ್ಲಿ ದ್ರಾಕ್ಷಾವೃಕ್ಷದ ವಿಶಿಷ್ಟತೆಯೇನು? ಕಾಡುಗಿಡಗಳ ಕಟ್ಟಿಗೆಗಿಂತ ದ್ರಾಕ್ಷಿಯ ಕಟ್ಟಿಗೆಯಲಿ ಹೆಚ್ಚಾದುದೇನು?

3ದ್ರಾಕ್ಷಿಯ ಕಟ್ಟಿಗೆಯನ್ನು ಬಳಸಿ ಮಾಡುತ್ತಾರೆಯೆ ಏನನ್ನಾದರು? ಸಾಮಗ್ರಿಗಳನ್ನು ತಗಲಿಹಾಕಲು ಅದರಿಂದ ಮಾಡುತ್ತಾರೆಯೇ ಗೂಟವನ್ನಾದರು?

4ಇಲ್ಲ, ಬೆಂಕಿಗೆ ಹಾಕುತ್ತಾರೆ. ಸೌದೆಯಾಗಿ, ಅದನ್ನು ಬೆಂಕಿ ಸುಟ್ಟುಬಿಡುತ್ತದೆ. ಅದರ ಎರಡು ಕೊನೆಗಳೂ ಇದ್ದಲಾಗುತ್ತವೆ. ಅದರ ಮಧ್ಯಭಾಗವು ಬಾರದು ಯಾವ ತರದ ಬಳಕೆಗು.

5ಇದ್ದ ಹಾಗೆಯೆ ಇದ್ದಾಗ ಅದು ಬಾರಲಿಲ್ಲ ಯಾವ ಕೆಲಸಕ್ಕು. ಬೆಂಕಿಯಲ್ಲಿ ಸುಟ್ಟು ಇದ್ದಲಾದಾಗ ಯಾವುದಕ್ಕೆ ಬಂದೀತು?”

6ಇಂತಿರಲು ಸರ್ವೇಶ್ವರನಾದ ದೇವರು ಹೇಳುವುದಿದು: “ವನವೃಕ್ಷಗಳಲ್ಲಿ ದ್ರಾಕ್ಷಾವೃಕ್ಷವನ್ನೆ ಅಗ್ನಿಗೆ ನಾನು ಸೌದೆಯನ್ನಾಗಿಸಿರುವಂತೆ ಕೊಟ್ಟಿರುವೆನು ಜೆರುಸಲೇಮನ್ನು ವಿನಾಶಕ್ಕೆ.

7ನಾನವರ ಮೇಲಿಡುವೆನು ಕೋಪ ದೃಷ್ಟಿಯನ್ನು; ಬೆಂಕಿಯಿಂದ ತಪ್ಪಿಸಿಕೊಂಡರೂ ನುಂಗಿಬಿಡುವುದು ಅದು ಅವರನ್ನು. ನಾನವರ ಮೇಲೆ ಕೋಪ ದೃಷ್ಟಿಯನ್ನಿಟ್ಟಾಗ ನಾನೇ ಸರ್ವೇಶ್ವರನೆಂದು ನಿಮಗೆ ಮನದಟ್ಟಾಗುವುದು.

8ಅವರು ದ್ರೋಹ ಮಾಡಿದ್ದರಿಂದ ನಾಡು ಕಾಡಾಗುವುದು ನನ್ನಿಂದ.” ಇದು ಸರ್ವೇಶ್ವರನಾದ ದೇವರ ನುಡಿ.