ಹಳೆಯ ಒಡಂಬಡಿಕೆKNCL

ವಿಮೋಚನಕಾಂಡ 28

1:ನನಗೆ ಯಾಜಕಸೇವೆ ಮಾಡಲು ನೀನು ನಿನ್ನ ಅಣ್ಣ ಆರೋನನನ್ನು ಮತ್ತು ಅವನ ಮಕ್ಕಳಾದ ನಾದಾಬ್, ಅಬೀಹು, ಎಲ್ಲಾಜಾರ್ ಹಾಗು ಈತಾಮಾರ್ ಎಂಬುವರನ್ನು ಇಸ್ರಯೇಲರ ಮಧ್ಯೆಯಿಂದ ನನ್ನ ಬಳಿಗೆ ಕರೆದುಕೊಂಡು ಬಾ.

2ನಿನ್ನ ಅಣ್ಣ ಆರೋನನಿಗೆ ತಕ್ಕ ಗೌರವ ಹಾಗು ಶೋಭೆ ತರುವಂಥ ದೀಕ್ಷಾವಸ್ತ್ರಗಳನ್ನು ಮಾಡಿಸು.

3ಯಾರಿಗೆ ನಾನು ಕಲಾಕುಶಲತೆಯನ್ನು ಪೂರ್ಣವಾಗಿ ಅನುಗ್ರಹಿಸಿದ್ದೇನೋ ಅಂಥವರೊಡನೆ ಚರ್ಚಿಸಿ ಅವರ ಕೈಯಿಂದ ಆ ವಸ್ತ್ರಗಳನ್ನು ಸಿದ್ಧಪಡಿಸು. ಆರೋನನು ಅವುಗಳನ್ನು ಧರಿಸಿಕೊಂಡು ನನ್ನ ಯಾಜಕ ಸೇವೆಗೆ ಪ್ರತಿಷ್ಠಿತನಾಗಲಿ.

4ತಯಾರಿಸಬೇಕಾದ ವಸ್ತ್ರಗಳು ಇವು: ಎದೆಕವಚ, ಏಫೋದ್ ಕವಚ, ಮೇಲಂಗಿ, ಕಸೂತಿ ನಿಲುವಂಗಿ, ಗುರುಪೇಟ ಮತ್ತು ನಡುಕಟ್ಟು, ನಿನ್ನ ಅಣ್ಣ ಆರೋನನು ಮತ್ತು ಅವನ ಮಕ್ಕಳು ನನ್ನ ಯಾಜಕರಾಗಿ ಸೇವೆ ಮಾಡುವಂತೆ ಅವರಿಗೆ ಈ ದೀಕ್ಷಾವಸ್ತ್ರಗಳನ್ನು ಮಾಡಿಸು.

5ಜನರು ಕಾಣಿಕೆಯಾಗಿ ಕೊಡುವ ಚಿನ್ನವನ್ನು, ನೀಲಿ, ಊದ ಹಾಗು ಕಡುಗೆಂಪುವರ್ಣಗಳುಳ್ಳ ದಾರವನ್ನು ಮತ್ತು ನಾರಿನಬಟ್ಟೆಯನ್ನು ಈ ವಸ್ತ್ರಗಳನ್ನು ತಯಾರಿಸಲು ಉಪಯೋಗಿಸು.

6‘ಏಫೋದ್’ ಎಂಬ ಕವಚವನ್ನು ಹುರಿನಾರಿನ ಬಟ್ಟೆಯಿಂದ ಮಾಡಿಸು. ಚಿನ್ನದ ದಾರದಿಂದಲೂ ಹಾಗು ನೀಲಿ, ಊದ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಕಸೂತಿ ಕೆಲಸದವರು ಅದನ್ನು ಅಲಂಕರಿಸಲಿ.

7ಈ ಕವಚಕ್ಕೆ ಹೆಗಲಿನ ಮೇಲೆ ಎರಡು ಪಟ್ಟಿಗಳಿರಬೇಕು. ಅದಕ್ಕೆ ಎರಡು ಕೊನೆಗಳು ಜೋಡಿಸಲ್ಪಡಬೇಕು.

8ಕವಚದ ಮೇಲಿರುವ ಕಸೂತಿ ಕೆಲಸದ ನಡುಕಟ್ಟು ಕವಚದ ಅಂಗವಾಗಿರಬೇಕು. ಅದರಂತೆಯೇ ಹುರಿನಾರಿನ ಬಟ್ಟೆಯಿಂದ ಮಾಡಿರಬೇಕು. ಚಿನ್ನದ ದಾರದಿಂದಲೂ ನೀಲಿ, ಊದ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಅಲಂಕೃತವಾಗಿರಬೇಕು.

9ಎರಡು ಗೋಮೇಧಕ ರತ್ನಗಳನ್ನು ತೆಗೆದುಕೊಂಡು ಅವುಗಳಲ್ಲಿ ಇಸ್ರಯೇಲರ ಕುಲಗಳ ಹೆಸರುಗಳನ್ನು ಕೆತ್ತಿಸು.

10ಒಂದು ರತ್ನದಲ್ಲಿ ಆರು ಹೆಸರುಗಳನ್ನು ಮತ್ತೊಂದು ರತ್ನದಲ್ಲಿ ಮಿಕ್ಕ ಆರು ಹೆಸರುಗಳನ್ನು ಅವರವರ ಜನನದ ಕ್ರಮಾನುಸಾರ ಕೆತ್ತಿಸು.

11ಮುದ್ರಾ, ರತ್ನವನ್ನು ಕೆತ್ತುವಂತೆ, ಈ ಎರಡು ರತ್ನಗಳಲ್ಲಿ ಇಸ್ರಯೇಲರ ಕುಲಗಳ ಹೆಸರುಗಳನ್ನು ಕೆತ್ತಿಸಿ ಆ ರತ್ನಗಳನ್ನು ಕುಂದಣದಲ್ಲಿ ಕಟ್ಟಿಸಬೇಕು.

12ಇಸ್ರಯೇಲರ ಜ್ಞಾಪಕಾರ್ಥವಾಗಿ ಆ ಎರಡು ರತ್ನಗಳನ್ನು ಹೆಗಲಿನ ಮೇಲಿರುವ ಕವಚದ ಪಟ್ಟಿಗಳಲ್ಲಿ ಬಿಗಿಸಬೇಕು. ಆರೋನನು ಸರ್ವೇಶ್ವರನಾದ ನನ್ನ ಸನ್ನಿಧಿಗೆ ಭುಜಗಳ ಮೇಲೆ ಅವುಗಳನ್ನು ಧರಿಸಿಕೊಂಡು ಬರುವನು.

13ಆ ರತ್ನಗಳನ್ನು ಖಚಿಸಿಡುವುದಕ್ಕೆ ಚಿನ್ನದ ಸರಿಗೆಯನ್ನು ಹೆಣೆದು ಗೂಡುಗಳನ್ನು ಮಾಡಿಸಬೇಕು.

14ಅಲ್ಲದೇ ಹೆಣೆಗೇ ಕೆಲಸದಿಂದ ಹುರಿಗಳಂತಿರುವ ಎರಡು ಅಪ್ಪಟ ಬಂಗಾರದ ಸರಪಣಿಗಳನ್ನು ಮಾಡಿಸಿ ಆ ರತ್ನಗಳ ಗೂಡುಗಳಿಗೆ ಸಿಕ್ಕಿಸಬೇಕು.

15“ದೈವನಿರ್ಣಯದ ಚೀಲವುಳ್ಳ ಎದೆಫಲಕವನ್ನು ಕಸೂತಿ ಕೆಲಸದಿಂದ ಮಾಡಿಸು. ಅದನ್ನು ಏಫೋದ್ ಕವಚದ ಕೆಲಸದಂತೆಯೇ ಚಿನ್ನದ ದಾರದಿಂದಲೂ, ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಹುರಿನಾರಿನ ಬಟ್ಟೆಯಿಂದ ಮಾಡಿಸು.

16ಅದು ಒಂದು ಗೇಣು ಉದ್ದ, ಒಂದು ಗೇಣು ಅಗಲ ಹಾಗು ಎರಡು ಪದರುಳ್ಳದ್ದಾಗಿ ಚಚ್ಚೌಕವಾಗಿರಲಿ.

17ಅದರ ಮುಂಭಾಗದಲ್ಲಿ ನಾಲ್ಕು ಸಾಲುಗಳಾಗಿ ಜವೆಯ ಕಲ್ಲುಗಳಲ್ಲಿ ರತ್ನಗಳನ್ನು ಸೇರಿಸಬೇಕು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಯರಾಗ ಹಾಗು ಸ್ಫಟಿಕಗಳನ್ನು;

18ಎರಡನೆಯ ಸಾಲಿನಲ್ಲಿ ಕೆಂಪರಲು ಹಾಗು ನೀಲಿ ಪಚ್ಚೆಗಳನ್ನು;

19ಮೂರನೆಯ ಸಾಲಿನಲ್ಲಿ ಸುವರ್ಣ ರತ್ನ, ಗೋಮೇಧಕ ಹಾಗು ಧೂಮ್ರಮಣಿಗಳನ್ನು; ಮತ್ತು

20ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ ಹಾಗು ವೈಢೂರ್ಯಗಳನ್ನು ಚಿನ್ನದ ಜವೆಯ ಕಲ್ಲುಗಳಲ್ಲಿ ಸೇರಿಸಬೇಕು.

21ಇಸ್ರಯೇಲರ ಕುಲಗಳ ಸಂಖ್ಯಾನುಸಾರ ಹನ್ನೆರಡು ರತ್ನಗಳಿರಬೇಕು. ಮುದ್ರಾ ರತ್ನದಲ್ಲಿ ಕೆತ್ತುವಂತೆ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರನ್ನು ಕೆತ್ತಿಸಬೇಕು.

22ಅದೂ ಅಲ್ಲದೆ ಆ ಎದೆಫಲಕದ ಮೇಲ್ಗಡೆಯಲ್ಲಿ ಹುರಿಗಳಂತಿರುವ ಅಪ್ಪಟ ಬಂಗಾರದ ಸರಪಣಿಗಳನ್ನು ಹೆಣಿಗೇ ಕೆಲಸದಿಂದ ಮಾಡಿಸಿಡಬೇಕು.

23ಎರಡು ಚಿನ್ನದ ಉಂಗುರಗಳನ್ನು ಮಾಡಿಸಿ ಪದಕದ ಎರಡು ಮೂಲೆಗಳಿಗೆ ಹಚ್ಚಬೇಕು.

24ಆ ಎರಡು ಸರಪಣಿಗಳನ್ನು ಪದಕದ ಮೂಲೆಗಳಲ್ಲಿರುವ ಉಂಗುರಗಳಿಗೆ ಸಿಕ್ಕಿಸಬೇಕು.

25ಆ ಸರಪಣಿಗಳ ಕೊನೆಗಳನ್ನು ಏಫೋದ್ ಕವಚದ ಹೆಗಲಿನ ಪಟ್ಟಿಗಳಲ್ಲಿರುವ ಎರಡು ಜವೆಗಳ ಮುಂಭಾಗಕ್ಕೆ ಸಿಕ್ಕಿಸಬೇಕು.

26ಅದಲ್ಲದೆ ಎರಡು ಚಿನ್ನದ ಉಂಗುರಗಳನ್ನು ಮಾಡಿಸಿ ಆ ಎದೆಫಲಕದ ಒಳಗೂ ಅಂಚಿನ ಮೂಲೆಗಳಲ್ಲಿ ಕವಚದ ಹತ್ತಿರದಲ್ಲೇ ಇಡಿಸಬೇಕು.

27ಬೇರೆ ಎರಡು ಚಿನ್ನದ ಉಂಗುರಗಳನ್ನು ಮಾಡಿಸಿ ಕವಚದ ಎರಡು ಹೆಗಲಿನ ಪಟ್ಟಿಗಳ ಮುಂಭಾಗದ ಕೆಳಗೆ, ಕವಚವನ್ನು ಜೋಡಿಸಿರುವ ಸ್ಥಳದ ಹತ್ತಿರ ಆ ಕಸೂತಿ ನಡುಕಟ್ಟಿನ ಮೇಲ್ಗಡೆಯಲ್ಲಿ ಇರಿಸಬೇಕು.

28ಎದೆಫಲಕವು ಕಸೂತಿ ನಡುಕಟ್ಟಿನ ಮೇಲ್ಗಡೆಯಲ್ಲಿ ಬಿಗಿಯಾಗಿರುವಂತೆ ಹಾಗು ಕವಚದಿಂದ ಕಳಚಿಬೀಳದಂತೆ ಅದರ ಉಂಗುರಗಳನ್ನು ಕವಚದ ಉಂಗುರಗಳಿಗೆ ನೀಲಿದಾರದಿಂದ ಕಟ್ಟಿಸಬೇಕು.

29“ದೈವನಿರ್ಣಯದ ಚೀಲವುಳ್ಳ ಆ ಫಲಕದ ಮೇಲೆ ಇಸ್ರಯೇಲರ ಕುಲಗಳ ಹೆಸರುಗಳು ಬರೆದಿರುವುದರಿಂದ ಆರೋನನು ಅದನ್ನು ತನ್ನ ಎದೆಯ ಮೇಲೆ ಧರಿಸಿಕೊಂಡು ಪವಿತ್ರಸ್ಥಾನದೊಳಗೆ ಬರುವಾಗಲೆಲ್ಲಾ ಆ ಹೆಸರುಗಳನ್ನು ಸರ್ವೇಶ್ವರನಾದ ನನ್ನ ನೆನಪಿಗೆ ಸತತವಾಗಿ ತರುವನು.

30ದೈವನಿರ್ಣಯವನ್ನು ತಿಳಿಸುವ ಊರಿಮ್ ಹಾಗು ತುಮ್ಮೀಮ್ ಎಂಬ ದಾಳಗಳನ್ನು ಆ ಫಲಕದ ಚೀಲದಲ್ಲಿ ಇಡಬೇಕು. ಆರೋನನು ಸರ್ವೇಶ್ವರನಾದ ನನ್ನ ಸನ್ನಿಧಿಗೆ ಬರುವಾಗ ಅವು ಅವನ ಎದೆಯ ಮೇಲೆ ಇರುವುವು. ಇಸ್ರಯೇಲರು ಕೈಗೊಳ್ಳಬೇಕಾದ ದೈವನಿರ್ಣಯವನ್ನು ಆರೋನನು ಹೀಗೆ ತನ್ನ ಹೃದಯದ ಮೇಲೆ ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಯಾವಾಗಲು ಧರಿಸಿಕೊಂಡಿರುವನು.

31“ಪ್ರಧಾನ ಯಾಜಕನು ಎಫೋದ್ ಕವಚದ ಸಂಗಡ ತೊಟ್ಟುಕೊಳ್ಳಬೇಕಾದ ಮೇಲಂಗಿಯನ್ನು ನೀಲಿ ಬಣ್ಣದ ಬಟ್ಟೆಯಿಂದ ಮಾಡಿಸು.

32ತಲೆದೂರಿಸುವುದಕ್ಕೆ ಇರುವ ಸಂದಿನ ಸುತ್ತಲೂ ನೇಯಿಗೆ ಕಸೂತಿಯನ್ನು ಹಾಕಿಸಬೇಕು.

33ಮೇಲಂಗಿಯ ಅಂಚಿನ ಸುತ್ತಲೂ ನೀಲಿ, ಊದ ಹಾಗು ಕಡುಗೆಂಪು ರಕ್ತವರ್ಣಗಳುಳ್ಳ ದಾರದಿಂದ ದಾಳಿಂಬೆ ಹಣ್ಣಿನಂತೆ ಚೆಂಡುಗಳನ್ನೂ ಅವುಗಳ ನಡುವೆ ಗೆಜ್ಜೆಗಳನ್ನೂ ತಗಲಿಸಬೇಕು.

34ಚಿನ್ನದ ಗೆಜ್ಜೆಯು ಹಾಗು ದಾಳಿಂಬೆಯಂತಿರುವ ಚಂಡು ಒಂದಾದ ಮೇಲೆ ಒಂದು ಆ ಮೇಲಂಗಿಯ ಅಂಚಿನ ಸುತ್ತಲು ಇರಬೇಕು.

35ಆರೋನನು ಸೇವೆ ಸಲ್ಲಿಸುವ ಸಮಯದಲ್ಲಿ ಅದನ್ನು ಧರಿಸಿಕೊಳ್ಳಬೇಕು. ಅವನು ಪವಿತ್ರಸ್ಥಾನದೊಳಗೆ ಸರ್ವೇಶ್ವರನಾದ ನನ್ನ ಸನ್ನಿಧಿಗೆ ಬರುವಾಗ ಹಾಗು ಹೋಗುವಾಗ ಆ ಗೆಜ್ಜೆಗಳ ಶಬ್ದ ಕೇಳಿಸಬೇಕು. ಇಲ್ಲದಿದ್ದರೆ ಅವನು ಸಾಯುವನು.

36“ಚೊಕ್ಕ ಬಂಗಾರದ ಪಟ್ಟಿಯೊಂದನ್ನು ಮಾಡಿಸಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ ಅದರ ಮೇಲೆ ‘ಸರ್ವೇಶ್ವರನಿಗೆ ಮೀಸಲು’ ಎಂಬ ಲಿಪಿಯನ್ನು ಕೆತ್ತಿಸಬೇಕು.

37ಅದನ್ನು ಪೇಟಕ್ಕೆ ಬಿಗಿಯುವುದಕ್ಕಾಗಿ ನೀಲಿದಾರವನ್ನು ಅದಕ್ಕೆ ಕಟ್ಟಿಸಬೇಕು. ಅದು ಪೇಟದ ಮುಂಭಾಗದಲ್ಲಿ ಇರಬೇಕು.

38ಇಸ್ರಯೇಲರನ್ನು ಪರಿಶುದ್ಧಗೊಳಿಸುವ ಪವಿತ್ರವಸ್ತುಗಳಲ್ಲಿ ಹಾಗು ಅವರು ಕಾಣಿಕೆಯಾಗಿ ಸಮರ್ಪಿಸುವ ಸಮಸ್ತವಸ್ತುಗಳಲ್ಲಿ ದೋಷವೇನಾದರು ಇದ್ದರೆ ಆರೋನನು ಆ ಪಟ್ಟಿಯನ್ನು ತಲೆಯ ಮೇಲೆ ಧರಿಸಿ ಆ ದೋಷವನ್ನು ತಾನೇ ವಹಿಸಿಕೊಳ್ಳುತ್ತಾನೆ. ಆದ್ದರಿಂದ ಅವರು ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಅಂಗೀಕೃತರಾಗುತ್ತಾರೆ.

39“ಆರೋನನು ಧರಿಸಬೇಕಾದ ನಿಲುವಂಗಿಯನ್ನು ನಯವಾದ ನಾರಿನಿಂದ ನೇಯಿಸು. ಅವನ ಪೇಟವನ್ನೂ ಅಂತೆಯೇ ನಯವಾದ ನಾರಿನಿಂದ ಮಾಡಿಸು. ಅವನ ನಡುಕಟ್ಟು ಕಸೂತಿ ಕೆಲಸದಿಂದ ಅಲಂಕಾರವಾಗಿರಬೇಕು.

40“ಆರೋನನ ಮಕ್ಕಳಿಗೆ ತಕ್ಕ ಗೌರವ ಹಾಗು ಶೋಭೆ ಸಿಗುವಂತೆ ನಿಲುವಂಗಿಗಳನ್ನೂ ನಡುಕಟ್ಟುಗಳನ್ನೂ ಹಾಗು ಪೇಟಗಳನ್ನು ಮಾಡಿಸು.

41ಈ ಬಗೆಯ ವಸ್ತ್ರಗಳನ್ನು ನಿನ್ನ ಅಣ್ಣನಾದ ಆರೋನನಿಗೂ ಅವನ ಮಕ್ಕಳಿಗೂ ತೊಡಿಸಿ, ಅವರನ್ನು ಅಭಿಷೇಕಿಸಿ, ಉದ್ಯೋಗಕ್ಕೆ ಸೇರಿಸಿ ಪ್ರತಿಷ್ಠಿಸು. ಆಗ ಅವರು ನನಗೆ ಯಾಜಕರಾಗಿರುವರು.

42ಅದೂ ಅಲ್ಲದೆ ಅವರ ಗುಪ್ತಾಂಗ ಕಾಣಿಸದಂತೆ ಸೊಂಟದಿಂದ ತೊಡೆಯ ತನಕ ನಾರಿನ ಚಡ್ಡಿಗಳನ್ನು ಮಾಡಿಸು.

43ಆರೋನನು ಮತ್ತು ಅವನ ಮಕ್ಕಳು ದೇವದರ್ಶನದ ಗುಡಾರದೊಳಗೆ ಬರುವಾಗ ಹಾಗು ಪವಿತ್ರಸ್ಥಾನದಲ್ಲಿ ಸೇವೆ ಮಾಡಲು ಬಲಿಪೀಠದ ಹತ್ತಿರ ಬರುವಾಗ ಇವುಗಳನ್ನು ಹಾಕಿಕೊಂಡಿರಲಿ. ಇಲ್ಲವಾದರೆ ಅವರು ಆ ಅಪರಾಧದ ನಿಮಿತ್ತ ಸಾಯುವರು. ಆರೋನನಿಗೂ ಅವನ ವಂಶಸ್ಥರಿಗೂ ಇದು ಶಾಶ್ವತವಾದ ನಿಯಮ.