ಹಳೆಯ ಒಡಂಬಡಿಕೆKNCL
1ಯಕೋಬನೊಡನೆ ಹಾಗು ತಮ್ಮ ತಮ್ಮ ಕುಟುಂಬಗಳೊಡನೆ ಈಜಿಪ್ಟ್ ದೇಶಕ್ಕೆ ಬಂದ ಇಸ್ರಯೇಲನ ಮಕ್ಕಳ ಹೆಸರುಗಳು ಇವು:
2ರೂಬೇನ್, ಸಿಮೆಯೋನ್, ಲೇವಿ, ಯೆಹೂದ,
3ಇಸ್ಸಾಕಾರ್, ಜೆಬುಲೂನ್, ಬೆನ್ಯಾಮೀನ್,
4ದಾನ್, ನಫ್ತಾಲಿ, ಗಾದ್ ಮತ್ತು ಆಶೇರ್.
5ಯಕೋಬನ ಸಂತತಿಯವರೆಲ್ಲರು ಎಪ್ಪತ್ತು ಮಂದಿ. ಜೋಸೆಫನು ಈಗಾಗಲೇ ಈಜಿಪ್ಟಿನಲ್ಲಿ ಇದ್ದನು.
6ಕಾಲಕ್ರಮೇಣ ಜೋಸೆಫನು, ಅವನ ಅಣ್ಣತಮ್ಮಂದಿರು ಹಾಗು ಆ ತಲೆಮಾರಿನ ಎಲ್ಲರು ತೀರಿಹೋದರು.
7ಆದರೂ ಇಸ್ರಯೇಲನ ವಂಶವು ಅಭಿವೃದ್ಧಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಿತು. ಅವರು ಶಕ್ತಿಶಾಲಿಗಳಾದರು. ಆ ದೇಶದಲ್ಲೆಲ್ಲಾ ತುಂಬಿಕೊಂಡರು.
8ಅನಂತರ ಹೊಸ ರಾಜನೊಬ್ಬನು ಈಜಿಪ್ಟ್ ದೇಶದ ಆಳ್ವಿಕೆಗೆ ಬಂದನು. ಅವನಿಗೆ ಜೋಸೆಫನ ವಿಷಯ ತಿಳಿದಿರಲಿಲ್ಲ.
9ಅವನು ತನ್ನ ಜನರಿಗೆ, “ಇಸ್ರಯೇಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಬಲಾಢ್ಯರಾಗಿದ್ದಾರೆ, ಅಧೀನದಲ್ಲಿರಿಸಲು ಕಷ್ಟಸಾಧ್ಯ.
10ಯುದ್ಧವೇನಾದರು ಸಂಭವಿಸಿದರೆ ಅವರು ನಮ್ಮ ಶತ್ರುಗಳೊಂದಿಗೆ ಕೂಡಿಕೊಂಡು ನಮಗೆ ವಿರೋಧವಾಗಿ ಕಾದಾಡಿ ನಾಡನ್ನು ಬಿಟ್ಟು ಪಲಾಯನ ಗೈಯಬಹುದು. ಆದ್ದರಿಂದ ಅವರು ವೃದ್ಧಿಯಾಗದಂತೆ ನಾವು ಉಪಾಯ ಹೂಡಬೇಕು,” ಎಂದು ಎಚ್ಚರಿಸಿದನು.
11ಅದರಂತೆಯೇ ಅವನ ಜನರು ಇಸ್ರಯೇಲರಿಗೆ ಕಿರುಕುಳ ಕೊಡಲು ತೊಡಗಿದರು. ಪುಕ್ಕಟೆಯಾಗಿ ಕೆಲಸಮಾಡಿಸಿಕೊಂಡರು. ಬಿಟ್ಟೀ ಕೆಲಸ ಮಾಡಿಸುವ ಅಧಿಕಾರಿಗಳನ್ನು ನೇಮಿಸಿ ಫರೋಹನಿಗೆ ‘ಪಿತೋಮ್’ ಮತ್ತು ‘ರಾಮ್ಸೇಸ್’ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು.
12ಈಜಿಪ್ಟರು ಅವರಿಗೆ ಎಷ್ಟು ಕಿರುಕುಳ ಕೊಡುತ್ತಿದ್ದರೋ ಅಷ್ಟೂ ಹೆಚ್ಚಿ ಹರಡಿಕೊಳ್ಳುತ್ತಿದ್ದರು.
13ಆದ್ದರಿಂದ ಇಸ್ರಯೇಲರ ಬಗ್ಗೆ ಈಜಿಪ್ಟರು ಸಹಿಸಲಾರದಷ್ಟು ಹೆದರಿಕೆ ಉಳ್ಳವರಾದರು. ಇಸ್ರಯೇಲರಿಂದ ಕ್ರೂರತನದಿಂದ ಸೇವೆಮಾಡಿಸಿಕೊಂಡರು.
14ಮಣ್ಣು ಅಗೆಯುವ ಕೆಲಸದಲ್ಲೂ ಇಟ್ಟಿಗೆ ಸುಡುವ ಕೆಲಸದಲ್ಲೂ ವ್ಯವಸಾಯದ ಮತ್ತಿತರ ಕೆಲಸಕಾರ್ಯಗಳಲ್ಲೂ ಕಠಿಣವಾಗಿ ಅವರಿಂದ ದುಡಿಸಿಕೊಂಡರು. ಅವರು ಮಾಡಿಸಿಕೊಳ್ಳುತ್ತಿದ್ದ ಪ್ರತಿಯೊಂದು ಕೆಲಸವು ಜೀವನವೇ ಬೇಡವೆನ್ನುವಷ್ಟು ಕಠೋರವಾಗಿ ಇರುತ್ತಿತ್ತು.
15ಇದೂ ಸಾಲದೆಂದು ಈಜಿಪ್ಟಿನ ಅರಸನು ಶಿಪ್ರಾ ಮತ್ತು ಪೂಗಾ ಎಂಬ ಹಿಬ್ರಿಯ ಸೂಲಗಿತ್ತಿಯರಿಗೆ,
16“ನೀವು ಹಿಬ್ರಿಯ ಮಹಿಳೆಯರಿಗೆ ಹೆರಿಗೆ ಮಾಡಿಸುವಾಗ ಅವರು ಹೆರುವ ಮಗು ಗಂಡಾಗಿದ್ದರೆ ಕೊಲ್ಲಬೇಕು, ಹೆಣ್ಣಾಗಿದ್ದರೆ ಉಳಿಸಬೇಕು,” ಎಂದು ಹೇಳಿದ್ದನು.
17ಆದರೆ ಆ ಸೂಲಗಿತ್ತಿಯರು ದೈವಭಕ್ತರು. ಈಜಿಪ್ಟಿನ ಅರಸ ಹೇಳಿದಂತೆ ಮಾಡದೆ ಗಂಡುಮಕ್ಕಳನ್ನು ಉಳಿಸಿದರು.
18ಆಗ ಆ ಅರಸನು ಅವರನ್ನು ಕರೆಯಿಸಿ, “ನೀವು ಗಂಡುಮಕ್ಕಳನ್ನು ಉಳಿಸಿದ್ದು ಏಕೆ? ಎಂದು ವಿಚಾರಿಸಿದನು.
19ಆ ಫರೋಹನಿಗೆ ಸೂಲಗಿತ್ತಿಯರು, “ಹಿಬ್ರಿಯ ಮಹಿಳೆಯರು ಈಜಿಪ್ಟಿನ ಮಹಿಳೆಯರಂತಲ್ಲ; ಏಕೆಂದರೆ ಅವರು ಗಟ್ಟಿಮುಟ್ಟಾದವರು. ಸೂಲಗಿತ್ತಿಯರು ಹತ್ತಿರ ಬರುವುದಕ್ಕೆ ಮುಂಚೆಯೇ ಹೆರುತ್ತಾರೆ,” ಎಂದು ಹೇಳಿದರು.
20ದೇವರು ಆ ಸೂಲಗಿತ್ತಿಯರಿಗೆ ಒಳ್ಳೆಯದನ್ನೆ ಮಾಡಿದರು. ಅವರಲ್ಲಿ ದೈವಭಕ್ತಿ ಇದ್ದುದರಿಂದ ಅವರಿಗೆ ವಂಶಾಭಿವೃದ್ಧಿಯನ್ನು ಉಂಟುಮಾಡಿದರು. ಇತ್ತ ಇಸ್ರಯೇಲರು ಸಂಖ್ಯೆಯಲ್ಲೂ ಶಕ್ತಿಯಲ್ಲೂ ಪ್ರವರ್ಧಿಸಿದರು.
22ಕಟ್ಟಕಡೆಗೆ ಫರೋಹನು ತನ್ನ ಜನರಿಗೆಲ್ಲಾ, "ಹಿಬ್ರಿಯರ ಗಂಡು ಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು; ಹೆಣ್ಣು ಕೂಸುಗಳನ್ನೆಲ್ಲಾ ಉಳಿಸಬೇಕು,” ಎಂದು ಆಜ್ಞೆಮಾಡಿದನು.