ಹಳೆಯ ಒಡಂಬಡಿಕೆKNCL
1ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆ ಎಂದರು: “ಫರೋಹನಿಗೂ ಈಜಿಪ್ಟಿನವರಿಗೂ ಇನ್ನೊಂದು ಪಿಡುಗನ್ನು ಬರಮಾಡುತ್ತೇನೆ. ಅದು ಬಂದನಂತರ ಅವನು ನಿಮಗೆ ಇಲ್ಲಿಂದ ಹೋಗುವುದಕ್ಕೆ ಅಪ್ಪಣೆಕೊಡುವನು. ಅದು ಮಾತ್ರವಲ್ಲ, ನಿಮ್ಮೆಲ್ಲರನ್ನು ಅಲ್ಲಿಂದ ಅಟ್ಟಿಬಿಡುವನು.
2ಆದುದರಿಂದ ಸ್ತ್ರೀಪುರುಷರೆಲ್ಲರು ತಮ್ಮ ತಮ್ಮ ನೆರೆಹೊರೆಯವರಿಂದ ಬೆಳ್ಳಿಬಂಗಾರದ ಒಡವೆಗಳನ್ನು ಕೇಳಿಕೊಳ್ಳಬೇಕೆಂದು ನಿಮ್ಮ ಜನರಿಗೆ ಸ್ಪಷ್ಟವಾಗಿಹೇಳು,” ಎಂದರು.
3ಈಜಿಪ್ಟಿನವರಿಗೆ ಇಸ್ರಯೇಲರ ಮೇಲೆ ಕನಿಕರ ಉಂಟಾಗುವಂತೆ ಮಾಡಿದರು ಸರ್ವೇಶ್ವರ. ಇದಲ್ಲದೆ ಈಜಿಪ್ಟ್ ದೇಶದ ಫರೋಹನ ಪರಿವಾರದವರು ಮೋಶೆಯನ್ನು ಮಹಾಪುರುಷನೆಂದು ಭಾವಿಸಿದರು.
4ಮೋಶೆ ಫರೋಹನಿಗೆ ಇಂತೆಂದನು: “ಸರ್ವೇಶ್ವರ ಮಾಡಿರುವ ಅಪ್ಪಣೆ ಇದು: ‘ನಡುರಾತ್ರಿಯ ವೇಳೆಯಲ್ಲಿ ನಾನೇ ಈಜಿಪ್ಟಿನವರ ನಡುವೆ ಹಾದುಹೋಗುವೆನು.
5ಆಗ, ಸಿಂಹಾಸನಾರೂಢನಾದ ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಬೀಸುಕಲ್ಲನ್ನು ಹಿಡಿದು ಕೂತಿರುವ ದಾಸಿಯ ಚೊಚ್ಚಲು ಮಗನವರೆಗೂ ಈಜಿಪ್ಟ್ ದೇಶದಲ್ಲಿ ಚೊಚ್ಚಲು ಮಕ್ಕಳೆಲ್ಲರು ಸಾಯುವರು. ಪಶುಪ್ರಾಣಿಗಳಲ್ಲೂ ಚೊಚ್ಚಲಾದವುಗಳೆಲ್ಲಾ ಸಾಯುವುವು.
6ಆಗ ಈಜಿಪ್ಟ್ ದೇಶದಲ್ಲೆಲ್ಲಾ ದೊಡ್ಡ ಗೋಳಾಟ ಉಂಟಾಗುವುದು. ಅಂಥ ಗೋಳಾಟ ಈವರೆಗೂ ಇರಲಿಲ್ಲ. ಇನ್ನು ಮುಂದೆಯೂ ಇರುವುದಿಲ್ಲ.
7ಆದರೆ ಇಸ್ರಯೇಲರಲ್ಲಿರುವ ಮನುಷ್ಯನ ವಿರುದ್ಧವಾಗಲಿ, ಪ್ರಾಣಿಯ ವಿರುದ್ಧವಾಗಲಿ, ಒಂದು ನಾಯಿ ಕೂಡ ಬೊಗಳುವುದಿಲ್ಲ. ಇದರಿಂದ ಸರ್ವೇಶ್ವರ ಇಸ್ರಯೇಲರಿಗೂ ಈಜಿಪ್ಟಿನವರಿಗೂ ತಾರತಮ್ಯ ಮಾಡಿದ್ದಾರೆಂದು ನಿಮಗೆ ಗೊತ್ತಾಗುವುದು.
8ಆಗ ನಿನ್ನ ಪರಿವಾರದವರಾದ ಇವರೆಲ್ಲರು ನನ್ನ ಬಳಿಗೆ ಬಂದು ಅಡ್ಡಬಿದ್ದು - ನೀವೂ ನಿಮ್ಮ ಅಧೀನದಲ್ಲಿರುವ ಜನರೆಲ್ಲರು ನಮ್ಮನ್ನು ಬಿಟ್ಟು ಹೋಗಿಬಿಡಿ - ಎಂದು ಬೇಡುವರು. ಇದಾದ ಮೇಲೆ ನಾನು ಹೊರಟುಹೋಗುವೆನು.’ ಈ ಮಾತುಗಳನ್ನು ಹೇಳಿ ಮೋಶೆ ಕೋಪದಿಂದ ಕಿಡಿಕಿಡಿಯಾಗಿ ಫರೋಹನನ್ನು ಬಿಟ್ಟು ಹೊರಟುಹೋದನು.
9ಸರ್ವೇಶ್ವರ ಮೋಶೆಗೆ, “ಫರೋಹನು ನಿಮ್ಮ ಮಾತನ್ನು ಕೇಳುವುದಿಲ್ಲ; ಆದ್ದರಿಂದ ಈಜಿಪ್ಟ್ ದೇಶದಲ್ಲಿ ಸೂಚಕಕಾರ್ಯಗಳನ್ನು ಹೆಚ್ಚಾಗಿ ನಡೆಸಲು ಆಸ್ಪದ ದೊರಕುವುದು,” ಎಂದು ಹೇಳಿದರು.
10ಮೋಶೆ ಮತ್ತು ಆರೋನರು ಫರೋಹನ ಮುಂದೆ ಈ ಸೂಚಕಕಾರ್ಯಗಳನ್ನೆಲ್ಲಾ ಮಾಡಿದ್ದರೂ ಸರ್ವೇಶ್ವರ ಫರೋಹನ ಹೃದಯವನ್ನು ಕಲ್ಲಾಗಿಸಿದ್ದರು. ಅವನು ತನ್ನ ದೇಶವನ್ನು ಬಿಟ್ಟು ಹೊರಡುವುದಕ್ಕೆ ಇಸ್ರಯೇಲರಿಗೆ ಅಪ್ಪಣೆಕೊಡದೆ ಹೋದನು.