ಹಳೆಯ ಒಡಂಬಡಿಕೆKNCL

ಉಪದೇಶಕನ ಗ್ರಂಥ ಪ್ರಸಂಗಿ 11

1ನಿನ್ನ ಆಹಾರ ಧಾನ್ಯವನ್ನು ಹೊರನಾಡಿನ ವ್ಯಾಪಾರಕ್ಕೆ ಹಾಕು. ಬಹುದಿನದ ಮೇಲೆ ಅದು ಬಡ್ಡಿ ಸಮೇತ ನಿನಗೆ ಸಿಕ್ಕುವುದು.

2ನಿನ್ನ ಹಣವನ್ನು ವಿಭಾಗಿಸಿ ಏಳೆಂಟು ಸ್ಥಳಗಳಲ್ಲಿ ಇಡು. ಏಕೆಂದರೆ ಎಲ್ಲಿ, ಎಂಥ ಕೇಡು ಸಂಭವಿಸಬಹುದೆಂದು ನಿನಗೆ ತಿಳಿಯದು.

3ಮಳೆ ತುಂಬಿದ ಮೋಡಗಳು ನೆಲದ ಮೇಲೆ ಸುರಿದುಬಿಡುತ್ತವೆ. ಮರವು ದಕ್ಷಿಣದ ಕಡೆಗಾಗಲಿ, ಉತ್ತರದ ಕಡೆಗಾಗಲಿ ಉರುಳಿದರೆ ಬಿದ್ದ ಕಡೆಯಲ್ಲೆ ಬಿದ್ದಿರುತ್ತದೆ.

4ಗಾಳಿಗಾಗಿಯೇ ಕಾದಿರುವವನು, ಮೋಡಕ್ಕಾಗಿಯೇ ಎದುರು ನೋಡುತ್ತಿರುವವನು ಎಂದಿಗೂ ಬೀಜಬಿತ್ತಲಾರನು; ಎಂದಿಗೂ ಪೈರು ಕೊಯ್ಯಲಾರನು.

5ಗಾಳಿಯ ಚಲನೆಯನ್ನಾಗಲಿ ಗರ್ಭಿಣಿಯ ಭ್ರೂಣದ ಬೆಳವಣಿಗೆಯನ್ನಾಗಲಿ ನಿನ್ನಿಂದ ತಿಳಿಯಲಾಗದು. ಅಂತೆಯೇ ಸರ್ವೇಶ್ವರನಾದ ದೇವರ ಕಾರ್ಯವನ್ನು ನಿನ್ನಿಂದ ಗ್ರಹಿಸಲಾಗದು.

6ಮುಂಜಾನೆಯಲ್ಲೇ ಬೀಜಬಿತ್ತು; ಸಂಜೆಯಲ್ಲೂ ನಿನ್ನ ಕೈಗೆ ಬಿಡುವುಕೊಡಬೇಡ; ಇದು ಸಫಲವೋ ಅದು ಸಫಲವೋ ನಿನ್ನಿಂದ ಹೇಳಲಾಗದು. ಒಂದು ವೇಳೆ ಎರಡೂ ಒಳ್ಳೆಯ ಬೆಳೆಯನ್ನು ಕೊಡಬಹುದು.

7ಬೆಳಕು ಬಹಳ ಇಂಪು; ಸೂರ್ಯನ ಕಾಂತಿ ಕಣ್ಣುಗಳಿಗೆ ಸೊಂಪು. ಮಾನವನು ಎಷ್ಟೇ ಧೀರ್ಘಕಾಲ ಬದುಕಿರಲಿ ತನ್ನ ಬಾಳಿನ ದಿನಗಳಲ್ಲೆಲ್ಲಾ ಆನಂದಿಸಲಿ; ಆದರೆ ಅಂಧಕಾರದ ದಿನಗಳು ಸಹ ಬಹಳ ಇವೆ ಎಂಬುದನ್ನು ನೆನಪಿಗೆ ತಂದುಕೊಳ್ಳಲಿ. ಆ ಬಳಿಕ ಬರುವುದೆಲ್ಲಾ ನಿರರ್ಥಕ.

8ಯುವಕನೇ, ಯೌವನದಲ್ಲಿ ಆನಂದಿಸು. ಯೌವನ ದಿನಗಳಲ್ಲಿ ಹೃತ್ಪೂರ್ವಕವಾಗಿ ಸಂತೋಷಿಸು. ಮನಸ್ಸಿಗೆ ತಕ್ಕಂತೆಯೂ ಕಣ್ಣಿಗೆ ಸರಿಬೀಳುವ ಹಾಗೆಯೂ ನಡೆದುಕೊ. ಆದರೆ ಈ ಎಲ್ಲ ವಿಷಯಗಳಲ್ಲಿ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವರೆಂಬುದನ್ನು ಮನದಲ್ಲಿಡು.

10ನಿನ್ನ ಹೃದಯದಿಂದ ವ್ಯಥೆಯನ್ನೂ ನಿನ್ನ ದೇಹದಿಂದ ಯಾತನೆಯನ್ನೂ ದೂರಮಾಡು. ಯೌವನವೂ ಪ್ರಾಯವೂ ಬೇಗ ಮಾಯವಾಗುವುವು.