ಹೊಸ ಒಡಂಬಡಿಕೆKNCL
1ಯಜಮಾನರೇ, ಸ್ವರ್ಗಲೋಕದಲ್ಲಿ ನಿಮಗೂ ಒಬ್ಬ ಒಡೆಯನಿದ್ದಾನೆಂಬುದನ್ನು ತಿಳಿದುಕೊಂಡು ನಿಮ್ಮ ಮನೆಯಾಳುಗಳನ್ನು ನ್ಯಾಯಬದ್ಧ ರೀತಿಯಲ್ಲಿ ನೋಡಿಕೊಳ್ಳಿ.
2ಪ್ರಾರ್ಥನಾ ಜೀವನ ನಡೆಸಿರಿ. ಪ್ರಾರ್ಥಿಸುವಾಗಲೆಲ್ಲಾ ಎಚ್ಚರವಾಗಿದ್ದು ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.
3ಕ್ರಿಸ್ತಯೇಸುವಿನ ರಹಸ್ಯವನ್ನು ಪ್ರಚುರಪಡಿಸಲು ನಮಗೆ ಅವಕಾಶ ದೊರಕುವಂತೆ ಪ್ರಾರ್ಥಿಸಿರಿ. ಈ ಶುಭಸಂದೇಶದ ನಿಮಿತ್ತವೇ ನಾನು ಸೆರೆಯಲ್ಲಿ ಇದ್ದೇನೆಂಬುದು ನಿಮಗೆ ತಿಳಿದಿದೆ. ನಾನು ಶುಭಸಂದೇಶವನ್ನು ಸ್ಪಷ್ಟವಾಗಿಯೂ ಸರಳವಾಗಿಯೂ ಸಾರುವಂತೆ ಪ್ರಾರ್ಥಿಸಿರಿ.
5ನೆರೆಯವರ ವಿಷಯದಲ್ಲಿ ಜಾಣತನದಿಂದ ವರ್ತಿಸಿರಿ. ನಿಮಗಿರುವ ಸಮಯ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಿರಿ.
6ನಿಮ್ಮ ಸಂಭಾಷಣೆ ಯಾವಾಗಲೂ ಹಿತಕರವಾಗಿದ್ದು ಇತರರನ್ನು ಆಕರ್ಷಿಸುವಂತಿರಲಿ. ನೀವು ಯಾರು ಯಾರಿಗೆ, ಹೇಗೆ ಉತ್ತರಿಸಬೇಕು ಎಂಬುದನ್ನು ಕಲಿತುಕೊಳ್ಳಿರಿ.
7ನಮ್ಮ ಪ್ರಿಯ ಸಹೋದರ ತುಖಿಕನು ನನ್ನ ವಿಷಯದಲ್ಲಿ ನಿಮಗೆ ಎಲ್ಲಾ ವರ್ತಮಾನವನ್ನು ಕೊಡುವನು. ಆತನು ಪ್ರಾಮಾಣಿಕ ಸೇವಕನೂ ಪ್ರಭುವಿನ ಸೇವೆಯಲ್ಲಿ ನನ್ನ ಸಂಗಡಿಗನೂ ಆಗಿದ್ದಾನೆ.
8ನನ್ನ ವಿಷಯದಲ್ಲಿ ನಿಮಗೆ ಎಲ್ಲವನ್ನೂ ತಿಳಿಸಿ, ನಿಮ್ಮನ್ನು ಹುರಿದುಂಬಿಸಿ, ಪ್ರೋತ್ಸಾಹಿಸುವುದಕ್ಕಾಗಿ ಆತನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ.
9ಆತನ ಜೊತೆಯಲ್ಲಿ ನಂಬಿಕಸ್ಥನಾದ ಪ್ರಿಯ ಸಹೋದರ ಒನೇಸಿಮನನ್ನು ಕಳುಹಿಸುತ್ತಿದ್ದೇನೆ. ಇವನು ನಿಮ್ಮ ಊರಿನ ಸಭೆಗೆ ಸೇರಿದವನು. ಇಲ್ಲಿ ನಡೆಯುವುದನ್ನೆಲ್ಲಾ ಇವರು ನಿಮಗೆ ತಿಳಿಸುವರು.
10ನನ್ನೊಡನೆ ಸೆರೆಯಾಳಾಗಿರುವ ಅರಿಸ್ತಾರ್ಕನೂ ಬಾರ್ನಬನಿಗೆ ಹತ್ತಿರದ ನೆಂಟನಾದ ಮಾರ್ಕನೂ ನಿಮಗೆ ಶುಭಾಶಯಗಳನ್ನು ಕಳುಹಿಸಿದ್ದಾರೆ. ಮಾರ್ಕನು ನಿಮ್ಮ ಬಳಿಗೆ ಬಂದಾಗ ಅವನನ್ನು ಸ್ವಾಗತಿಸಿರಿ. ಅವನ ವಿಷಯದಲ್ಲಿ ನಿಮಗೆ ಸಲಹೆಗಳನ್ನು ಕೊಡಲಾಗಿದೆ.
11ಯುಸ್ತನೆನಿಸಿಕೊಳ್ಳುವ ಯೇಸು ಕೂಡ ನಿಮಗೆ ವಂದನೆಗಳನ್ನು ತಿಳಿಸಿದ್ದಾನೆ. ಕ್ರೈಸ್ತರಾದ ಯೆಹೂದ್ಯರಲ್ಲಿ ಇವರೇ ನನ್ನೊಡನೆ ದೇವರ ಸಾಮ್ರಾಜ್ಯದ ಏಳಿಗೆಗಾಗಿ ದುಡಿಯುತ್ತಿರುವವರು. ಇವರಿಂದ ನನಗೆ ತುಂಬಾ ಆದರಣೆ ದೊರಕಿದೆ.
12ಕ್ರಿಸ್ತಯೇಸುವಿನ ಸೇವಕನೂ ನಿಮ್ಮ ಸಭೆಗೆ ಸೇರಿದವನೂ ಆದ ಎಪಫ್ರನಿಂದಲೂ ನಿಮಗೆ ವಂದನೆಗಳು. ನೀವು ಮಾಡುವ ಎಲ್ಲಾ ಕಾರ್ಯಗಳಲ್ಲೂ ದೇವರ ಚಿತ್ತಕ್ಕೆ ವಿಧೇಯರಾಗಿ ಸ್ಥಿರ ಹಾಗೂ ಸಿದ್ಧ ಕ್ರೈಸ್ತರಾಗಿ ಬಾಳಬೇಕೆಂದು ಅವನು ನಿಮಗಾಗಿ ಸದಾ ಆಸಕ್ತಿಯಿಂದ ಪ್ರಾರ್ಥಿಸುತ್ತಿದ್ದಾನೆ.
13ನಿಮಗಾಗಿಯೂ ಲವೊದಿಕೀಯ ಹಾಗೂ ಹಿರೆಯಾಪೊಲಿಯದ ಜನರಿಗಾಗಿಯೂ ಆತನು ಶ್ರಮವಹಿಸಿ ದುಡಿಯುತ್ತಿದ್ದಾನೆಂಬುದಕ್ಕೆ ನಾನೇ ಸಾಕ್ಷಿ.
14ನಮ್ಮ ಪ್ರಿಯ ವೈದ್ಯನಾದ ಲೂಕನೂ ದೇಮಾಸನೂ ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ.
15ಲವೊದಿಕೀಯದಲ್ಲಿರುವ ನಮ್ಮ ಸಹೋದರರು ನಿಂಫಳು ಮತ್ತು ಆಕೆಯ ಮನೆಯಲ್ಲಿ ಸೇರುವ ಸಭೆಯವರು ಇವರೆಲ್ಲರಿಗೂ ನಮ್ಮ ಅಭಿನಂದನೆಗಳು.
16ಈ ಪತ್ರವನ್ನು ನೀವು ಓದಿದ ಬಳಿಕ ಲವೊದಿಕೀಯದ ಸಭೆಯವರಿಗೆ ಓದಿ ಹೇಳುವ ವ್ಯವಸ್ಥೆಮಾಡಿರಿ. ಅಂತೆಯೇ, ಲವೊದಿಕೀಯದಿಂದ ಕಳಿಸಲಾಗುವ ಪತ್ರವನ್ನು ತರಿಸಿಕೊಂಡು ಓದಿರಿ.
17ತನಗೆ ಒಪ್ಪಿಸಿದ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕೆಂಬುದಾಗಿ ಅರ್ಖಿಪ್ಪನಿಗೆ ತಿಳಿಸಿರಿ.
18ಇದನ್ನು ಪೌಲನಾದ ನಾನೇ ಸ್ವತಃ ಬರೆಯುತ್ತಿದ್ದೇನೆ. ನಾನು ಸೆರೆಯಲ್ಲಿದ್ದೇನೆ ಎಂಬುದು ನಿಮಗೆ ನೆನಪಿರಲಿ. ಶುಭಾಶಯಗಳು! ದೈವಾನುಗ್ರಹ ನಿಮ್ಮಲ್ಲಿರಲಿ!