ಹಳೆಯ ಒಡಂಬಡಿಕೆKNCL
1ಒಡೆಯರಾದ ಸರ್ವೇಶ್ವರ ನನಗೆ ಈ ದರ್ಶನವನ್ನು ತೋರಿಸಿದರು: ಮಾಗಿದ ಹಣ್ಣಿನ ಬುಟ್ಟಿಯೊಂದು ಕಾಣಿಸಿತು.
2ಅವರು ನನಗೆ: “ಆಮೋಸನೇ, ನಿನ್ನ ಕಣ್ಣಿಗೆ ಕಾಣಿಸುವುದೇನು?” ಎಂದು ಕೇಳಿದರು. “ಮಾಗಿದ ಹಣ್ಣಿನ ಒಂದು ಬುಟ್ಟಿ” ಎಂದು ಉತ್ತರಿಸಿದೆ. ಆಗ ಸರ್ವೇಶ್ವರ ನನಗೆ ಹೀಗೆಂದರು: “ಇಸ್ರಯೇಲರಾದ ನನ್ನ ಜನರಿಗೆ ಕಡೆಗಾಲ ಮಾಗುತ್ತಾ ಬಂದಿದೆ. ಇನ್ನು ಅವರನ್ನು ಕಂಡೂ ಕಾಣದಂತೆ ಇರಲಾರೆ. ಅವರನ್ನು ದಂಡಿಸಿಯೇ ತೀರುವೆನು.
3ಆ ದಿನದಲ್ಲಿ ಆಸ್ಥಾನದ ಗೀತೆಗಳು ಶೋಕಗೀತೆಗಳಾಗಿ ಮಾರ್ಪಡುವುವು. ಹೆಣಗಳು ಎಲ್ಲೆಲ್ಲೂ ಬಿದ್ದಿರುವುವು. ಅವುಗಳನ್ನು ಸದ್ದುಗದ್ದಲವಿಲ್ಲದೆ ಬಿಸಾಡಲಾಗುವುದು.” ಇದು ಸರ್ವೇಶ್ವರಸ್ವಾಮಿಯ ನುಡಿ.
4ದಿಕ್ಕಿಲ್ಲದವರನ್ನು ತುಳಿದುಬಿಡುವವರೇ, ನಾಡಿನ ಬಡವರನ್ನು ನಿರ್ಮೂಲ ಮಾಡುವವರೇ, ಕೇಳಿ,
5“ದವಸಧಾನ್ಯಗಳನ್ನು ಮಾರಬೇಕಲ್ಲ, ಈ ಅಮಾವಾಸ್ಯೆ ತೀರುವುದು ಯಾವಾಗ? ಗೋದಿಯ ವ್ಯಾಪಾರ ಮಾಡಬೇಕಾಗಿದೆ. ಸಬ್ಬತ್ ದಿನ ಕಳೆಯುವುದು ಯಾವಾಗ? ಕೊಳಗವನ್ನು ಕಿರಿದು ಮಾಡೋಣ, ತೊಲವನ್ನು ಹಿರಿದು ಮಾಡೋಣ, ಕಳ್ಳತಕ್ಕಡಿಯನ್ನು ಬಳಸೋಣ;
6ಬಡವರನ್ನು ಬೆಳ್ಳಿಗೆ, ದಿಕ್ಕಿಲ್ಲದವರನ್ನು ಒಂದು ಜೊತೆ ಕೆರಕ್ಕೆ ಕೊಂಡುಕೊಳ್ಳೋಣ; ಗೋದಿಯ ನುಚ್ಚುನುಸಿಯನ್ನೂ ಬಿಡದಂತೆ ಮಾರಿಬಿಡೋಣ,” ಎಂದುಕೊಳ್ಳುತ್ತೀರಿ, ಅಲ್ಲವೆ?
7ಯಕೋಬನ ಮಹಿಮಾನ್ವಿತ ಸರ್ವೇಶ್ವರ ಆಣೆಯಿಟ್ಟು ಹೇಳುವುದೇನೆಂದರೆ: “ಖಂಡಿತವಾಗಿ ಅವರ ದುಷ್ಕೃತ್ಯಗಳಲ್ಲಿ ಯಾವುದನ್ನೂ ಎಂದಿಗೂ ನಾನು ಮರೆಯಲಾರೆ.
8ಅವರ ದುಷ್ಕೃತ್ಯಗಳ ನಿಮಿತ್ತವೇ ನಾಡು ಕಂಪಿಸುವುದು; ನಿವಾಸಿಗಳೆಲ್ಲರು ದುಃಖಿಸುವರು. ನಾಡೆಲ್ಲವು ನೈಲ್ ನದಿಯಂತೆ ಉಬ್ಬುವುದು. ಅಲ್ಲೋಲಕಲ್ಲೋಲವಾಗಿ ಈಜಿಪ್ಟಿನ ನದಿಯಂತೆ ಕುಗ್ಗಿ ಕರಗಿಹೋಗುವುದು.
9ಒಡೆಯರಾದ ಸರ್ವೇಶ್ವರ ಇಂತೆನ್ನುತ್ತಾರೆ: “ಆ ದಿನದಂದು ನಡುಮಧ್ಯಾಹ್ನದಲ್ಲಿ ಸೂರ್ಯನನ್ನು ಮುಳುಗಿಸುವೆನು. ಹಾಡುಹಗಲಲ್ಲೇ ಭೂಮಿಯನ್ನು ಕತ್ತಲಾಗಿಸುವೆನು.
10ನಿಮ್ಮ ಕೊಂಡಾಟದಿನಗಳನ್ನು ಗೋಳಾಟ ದಿನಗಳನ್ನಾಗಿ ಮಾರ್ಪಡಿಸುವೆನು. ನಿಮ್ಮ ಹರ್ಷಗೀತೆಗಳನ್ನು ಶೋಕಗೀತೆಗಳನ್ನಾಗಿ ಬದಲಾಯಿಸುವೆನು. ನೀವೆಲ್ಲರೂ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಂಡು, ತಲೆ ಬೋಳಿಸಿಕೊಳ್ಳುವಂತೆ ಮಾಡುವೆನು. ಏಕಮಾತ್ರ ಪುತ್ರನನ್ನು ಕಳೆದುಕೊಂಡವರಂತೆ ನೀವು ಅತ್ತು ಪ್ರಲಾಪಿಸುವಿರಿ. ಆ ದಿನವೆಲ್ಲಾ ನಿಮಗೆ ಕರಾಳ ದಿನವಾಗುವುದು.”
11ಒಡೆಯರಾದ ಸರ್ವೇಶ್ವರ ಇಂತೆನ್ನುತ್ತಾರೆ: “ದಿನಗಳು ಬರಲಿವೆ. ಅಂದು ನಾಡಿನಲ್ಲಿ ಕ್ಷಾಮವನ್ನುಂಟುಮಾಡುವೆನು. ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವೂ ಅಲ್ಲ; ಸರ್ವೇಶ್ವರನ ಸಂದೇಶಕ್ಕಾಗಿ ಹಸಿದು ಹಂಬಲಿಸುವ ಕ್ಷಾಮ.
12ಜನರು ಸಮುದ್ರದಿಂದ ಸಮುದ್ರದವರೆಗೆ ಉತ್ತರದಿಂದ ಪೂರ್ವದವರೆಗೆ ಅತ್ತಿತ್ತ ಹುಡುಕುತ್ತಾ ಬಳಲಿಹೋಗುವರು. ಆದರೂ ಅದು ಸಿಗದು.
13ಆ ದಿನದಂದು ಗಟ್ಟಿಮುಟ್ಟಾದ ಯುವಕ ಯುವತಿಯರೂ ಬಾಯಾರಿಕೆಯಿಂದ ಮೂರ್ಛೆಹೋಗುವರು.
14ದಾನೇ, ನಿನ್ನ ದೇವರ ಜೀವದಾಣೆ’ ಎಂದೂ, ‘ಬೇರ್ಷೆಬಾ ಯಾತ್ರೆಯ ಜೀವದಾಣೆ’ ಎಂದೂ ಸಮಾರ್ಯದ ವಿಗ್ರಹಗಳ ಮೇಲೆ ಪ್ರಮಾಣ ಮಾಡುವವರು ಮತ್ತೆ ಏಳದಂತೆ ಬಿದ್ದುಹೋಗುವರು.”