ಹಳೆಯ ಒಡಂಬಡಿಕೆKNCL
1ಒಡೆಯರಾದ ಸರ್ವೇಶ್ವರ ನನಗೆ ತೋರಿಸಿದ ದರ್ಶನ ಇದು: ಹಿಂಗಾರು ಮಳೆ ಬಿದ್ದಿತ್ತು. ಪೈರು ಸೊಂಪಾಗಿ ಬೆಳೆಯಲು ಆರಂಭಿಸಿತ್ತು. ಈಗಾಗಲೇ ರಾಜಾದಾಯದ ಹುಲ್ಲಿನ ಕೊಯಿಲು ಮುಗಿದು ಮತ್ತೆ ಹುಲ್ಲು ಬೆಳೆಯುತ್ತಿತ್ತು. ಆಗ ಸರ್ವೇಶ್ವರ ಮಿಡತೆಗಳ ಗುಂಪೊಂದನ್ನು ಹೊರಡಿಸಿದರು.
2ಮಿಡತೆಗಳು ನಾಡಿನ ಪೈರು ಪಚ್ಚೆಯನ್ನೆಲ್ಲ ತಿಂದುಬಿಟ್ಟವು. ಆಮೇಲೆ ನಾನು ಪ್ರಭುವಿಗೆ ಹೀಗೆಂದು ಮೊರೆಯಿಟ್ಟೆ: “ಒಡೆಯರಾದ ಸರ್ವೇಶ್ವರಾ, ನಮ್ಮನ್ನು ಆಲಿಸಿ, ಕ್ಷಮಿಸಿರಿ; ಅತಿ ಚಿಕ್ಕದಾದ ಯಕೋಬ ಜನಾಂಗ ಈ ಪಿಡುಗಿನಿಂದ ಉಳಿಯುವುದುಂಟೆ?”
3ಇದನ್ನು ಕೇಳಿ ಸರ್ವೇಶ್ವರ ಮನಮರುಗಿದರು. “ಈ ದರ್ಶನ ನೆರವೇರುವುದಿಲ್ಲ” ಎಂದು ಅಭಯವಿತ್ತರು.
4ಒಡೆಯರಾದ ಸರ್ವೇಶ್ವರ ನನಗೆ ಇನ್ನೊಂದು ದರ್ಶನವನ್ನು ತೋರಿಸಿದರು. ಅವರು ತನ್ನ ಜನರನ್ನು ದಂಡಿಸುವುದಕ್ಕಾಗಿ ಬೆಂಕಿಯನ್ನು ಬರಮಾಡಿದರು. ಅದು ಆಳವಾದ ಮಹಾಸಾಗರವನ್ನೂ ಇಡೀ ನಾಡನ್ನೂ ಕಬಳಿಸುವುದರಲ್ಲಿತ್ತು.
5ಆಗ ನಾನು ಆ ಸ್ವಾಮಿಗೆ: “ಆಲಿಸಿ, ಈ ಪಿಡುಗನ್ನು ತಪ್ಪಿಸಿ, ಅತಿ ಚಿಕ್ಕದಾದ ಯಕೋಬ ಜನಾಂಗ ಮುಂದೆ ಹೇಗೆ ಉಳಿದೀತು” ಎಂದು ಮೊರೆಯಿಟ್ಟೆ.
6ಒಡೆಯರಾದ ಸರ್ವೇಶ್ವರ ಇದನ್ನು ಕೇಳಿ ಮನಮರುಗಿ: “ಈ ದರ್ಶನ ನೆರವೇರುವುದಿಲ್ಲ” ಎಂದು ಅಭಯವಿತ್ತರು.
7ಆ ಸ್ವಾಮಿಯಿಂದ ನನಗೆ ಮತ್ತೊಂದು ದರ್ಶನವಾಯಿತು. ಸ್ವಾಮಿ ನೂಲು ಮಟ್ಟದ ಗೋಡೆಯ ಮೇಲೆ ನಿಂತಿದ್ದರು. ಅವರ ಕೈಯಲ್ಲಿ ನೂಲುಗುಂಡೊಂದು ಇತ್ತು.
8ಅವರು ನನಗೆ: “ಆಮೋಸನೇ, ನಿನ್ನ ಕಣ್ಣಿಗೆ ಕಾಣಿಸುವುದೇನು?” ಎಂದು ಕೇಳಿದರು. ನಾನು “ಒಂದು ನೂಲುಗುಂಡು,” ಎಂದು ಉತ್ತರಕೊಟ್ಟೆ. ಆಗ ಸ್ವಾಮಿ, “ಇಗೋ,ನನ್ನ ಜನರಾದ ಇಸ್ರಯೇಲಿನ ಮಧ್ಯೆ ನೂಲುಗುಂಡನ್ನು ಹಿಡಿದು ಅವರ ನಡತೆ-ಗೋಡೆ ನೆಟ್ಟಗಿಲ್ಲವೆಂದು ತೋರಿಸುವೆನು. ಅವರನ್ನು ಕಂಡೂ ಕಾಣದಂತಿರದೆ, ದಂಡಿಸಿಯೇ ತೀರುವೆನು.
9ಇಸಾಕನ ವಂಶದವರ ಎತ್ತರವಾದ ಪೂಜಾಮಂದಿರಗಳು ನೆಲಸಮವಾಗುವುವು. ಇಸ್ರಯೇಲಿನ ಪವಿತ್ರಾಲಯಗಳು ಪಾಳುಬೀಳುವುವು. ಯಾರೊಬ್ಬಾಮನ ಮನೆತನ ಕತ್ತಿಗೆ ತುತ್ತಾಗುವುದು,” ಎಂದರು.
10ತರುವಾಯ ಬೇತೇಲಿನ ಯಾಜಕನಾದ ಅಮಚ್ಯನು ಇಸ್ರಯೇಲಿನ ಅರಸ ಯಾರೊಬ್ಬಾಮನಿಗೆ ಹೀಗೆ ಹೇಳಿಕಳುಹಿಸಿದನು: “ಆಮೋಸನು ನಿನಗೆ ವಿರುದ್ಧವಾಗಿ ಇಸ್ರಯೇಲರಲ್ಲಿ ಒಳಸಂಚು ಹೂಡಿದ್ದಾನೆ. ಅವನ ಮಾತುಗಳನ್ನು ನಾಡು ಸಹಿಸಲಾರದು.
11ಏಕೆಂದರೆ, “ಯಾರೊಬ್ಬಾಮನು ಖಡ್ಗದಿಂದ ಹತನಾಗುವನು. ಇಸ್ರಯೇಲ್ ಸ್ವಂತ ನಾಡಿನಿಂದ ಪರದೇಶಕ್ಕೆ ಒಯ್ಯಲ್ಪಡುವುದು ಖಂಡಿತ ಎಂದು ಅವನು ನುಡಿದಿದ್ದಾನೆ.”
12ಆ ಬಳಿಕ ಅಮಚ್ಯನು ಆಮೋಸನಿಗೆ, “ಕಣಿಹೇಳುವವನೇ, ತೊಲಗು, ಜುದೇಯ ನಾಡಿಗೆ ಓಡಿಹೋಗು; ಅಲ್ಲಿ ಪ್ರವಾದನೆಮಾಡಿ ಹೊಟ್ಟೆ ಹೊರೆದುಕೊ.
13ಬೇತೇಲಿನಲ್ಲಿ ಇನ್ನು ಪ್ರವಾದನೆ ಮಾಡಬೇಡ. ಇದು ರಾಜನ ಗರ್ಭಗುಡಿ, ರಾಜ್ಯದ ಪವಿತ್ರಾಲಯ,” ಎಂದನು.
14ಅದಕ್ಕೆ ಆಮೋಸನು ಪ್ರತ್ಯುತ್ತರವಾಗಿ: “ನಾನು ಪ್ರವಾದಿಯಲ್ಲ, ಪ್ರವಾದಿಯ ಮಗನೂ ಅಲ್ಲ. ನಾನೊಬ್ಬ ಗೊಲ್ಲ, ಅತ್ತಿಹಣ್ಣನ್ನು ಕೀಳುವವನು.
15ಮಂದೆ ಕಾಯುವುದರಿಂದ ಸರ್ವೇಶ್ವರ ನನ್ನನ್ನು ಬಿಡಿಸಿದರು. ನೀನು ಹೋಗಿ ನನ್ನ ಜನರಾದ ಇಸ್ರಯೇಲರಿಗೆ ಪ್ರವಾದನೆಮಾಡು’ ಎಂದು ಹೇಳಿಕಳುಹಿಸಿದರು.
16“ಆದ್ದರಿಂದ ಆ ಸರ್ವೇಶ್ವರಸ್ವಾಮಿಯ ವಾಕ್ಯವನ್ನು ಗಮನಿಸು: ‘ಇಸ್ರಯೇಲಿಗೆ ವಿರುದ್ಧ ಪ್ರವಾದನೆ ಮಾಡಬೇಡ; ಇಸಾಕನ ಮನೆತನದ ವಿರುದ್ಧ ಮಾತೆತ್ತಬೇಡ; ಎಂದು ನೀನು ಹೇಳುತ್ತೀಯಲ್ಲವೆ?
17ನೀನು ಹೀಗೆ ಹೇಳಿದ್ದರಿಂದ ಸರ್ವೇಶ್ವರ ಇಂತೆನ್ನುತ್ತಾರೆ: ‘ನಿನ್ನ ಹೆಂಡತಿ ಈ ಪಟ್ಟಣದಲ್ಲಿ ವೇಶ್ಯೆಯಾಗುವಳು. ನಿನ್ನ ಪುತ್ರಪುತ್ರಿಯರು ಕತ್ತಿಗೆ ತುತ್ತಾಗುವರು. ನಿನ್ನ ನಾಡನ್ನು ಶತ್ರುಗಳು ವಶಪಡಿಸಿಕೊಂಡು ಹಂಚಿಕೊಳ್ಳುವರು. ನೀನು ಸಹ ಅಪವಿತ್ರವಾದ ನಾಡಿನಲ್ಲಿ ಸಾಯುವೆ. ಇಸ್ರಯೇಲರು ಖಂಡಿತವಾಗಿ ಸ್ವಂತ ನಾಡಿನಿಂದ ಪರದೇಶಕ್ಕೆ ಸೆರೆಯಾಗಿಹೋಗುವರು’,” ಎಂದು ಹೇಳಿದನು.