ಹೊಸ ಒಡಂಬಡಿಕೆKNCL

ಪೌಲನು ತಿಮೊಥೇಯನಿಗೆ ಬರೆದ ಎರಡನೆಯ ಪತ್ರ 3

1ಅಂತಿಮ ದಿನಗಳು ಕಷ್ಟಕರವಾದ ಕಾಲವಾಗಿರುತ್ತದೆಂಬುದನ್ನು ಜ್ಞಾಪಕದಲ್ಲಿಡು.

2ಜನರು ಸ್ವಾರ್ಥಚಿಂತಕರೂ ಲೋಭಿಗಳೂ ಅಹಂಕಾರಿಗಳೂ ಬಡಾಯಿಕೋರರೂ ದೇವದೂಷಕರೂ ಹೆತ್ತವರಿಗೆ ಅವಿಧೇಯರೂ ಕೃತಘ್ನರೂ ಭಕ್ತಿಹೀನರೂ ಆಗುವರು.

3ಅವರು ಮಮತೆ ಇಲ್ಲದವರೂ ಸಮಾಧಾನ ಸಹಿಸದವರೂ ಚಾಡಿಕೋರರೂ ಸ್ವೇಚ್ಛಾವರ್ತಿಗಳೂ ಕ್ರೂರಿಗಳೂ ಒಳಿತನ್ನು ದ್ವೇಷಿಸುವವರೂ ಆಗುವರು.

4ನಂಬಿಕೆದ್ರೋಹಿಗಳೂ ದುಡುಕುವವರೂ ಮಹಾಗರ್ವಿಗಳೂ ಆಗುವರು. ದೇವರನ್ನು ಅರಸದೆ ಭೋಗಗಳನ್ನೇ ಬಯಸುವರು.

5ಅವರು ಭಕ್ತಿಯ ವೇಷ ಧರಿಸಿದ್ದರೂ ಅದರ ನಿಜವಾದ ಶಕ್ತಿಯನ್ನು ಅಲ್ಲಗಳೆಯುವರು. ಇಂಥವರ ಸಹವಾಸ ನಿನಗೆ ಬೇಡ.

6ಇವರಲ್ಲಿ ಕೆಲವರು ಮನೆಮನೆಗಳಿಗೆ ನುಸಳಿ ನಾನಾ ಪಾಪಗಳಿಂದಲೂ ಕಾಮನೆಗಳಿಂದಲೂ ಕೂಡಿರುವ ಮತಿಗೆಟ್ಟ ಮಹಿಳೆಯರನ್ನು ವಶಪಡಿಸಿಕೊಳ್ಳುವರು.

7ಆ ಮಹಿಳೆಯರಾದರೋ ಯಾರಿಗೆ ಬೇಕಾದರೂ ಕಿವಿಗೊಡುವರು. ಸತ್ಯವನ್ನು ಮಾತ್ರ ಮನಗಾಣರು.

8ಯನ್ನ ಮತ್ತು ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆ, ಇವರು ಸತ್ಯವನ್ನು ಪ್ರತಿಭಟಿಸುತ್ತಾರೆ.

9ದುರ್ಮತಿಗಳೂ ವಿಶ್ವಾಸಭ್ರಷ್ಟರೂ ಆಗಿದ್ದಾರೆ. ಆದರೆ ಅವರ ಮೂರ್ಖತನ ದೀರ್ಘಕಾಲ ಬಾಳದು. ಯನ್ನ ಮತ್ತು ಯಂಬ್ರಳ ದೋಷದಂತೆ ಅದು ಸರ್ವರಿಗೂ ಬಟ್ಟಬಯಲಾಗುತ್ತದೆ.

10ನೀನಾದರೋ ನನ್ನ ಬೋಧನೆ, ನಡತೆ ಹಾಗೂ ಧ್ಯೇಯಗಳನ್ನು ಅರಿತಿರುವೆ. ನನ್ನ ವಿಶ್ವಾಸ, ಸಹಿಷ್ಣುತೆ ಮತ್ತು ಸೈರಣೆ ನಿನಗೆ ತಿಳಿದಿದೆ.

11ನಾನು ಅನುಭವಿಸಿದ ಹಿಂಸೆನೋವುಗಳ ಮತ್ತು ಕಷ್ಟದುಃಖಗಳ ಕುರಿತು ಕೇಳಿರುವೆ. ಅಂತಿಯೋಕ್ಯ, ಇಕೋನಿಯ ಮತ್ತು ಲುಸ್ತ್ರ ಪಟ್ಟಣಗಳಲ್ಲಿ ನಾನು ಎಂಥ ಕ್ರೂರವಾದ ಹಿಂಸೆ ಅನುಭವಿಸಿದೆನೆಂಬುದು ನಿನಗೆ ತಿಳಿಯದ ವಿಷಯವೇನೂ ಅಲ್ಲ. ಆದರೆ ಪ್ರಭು ನನ್ನನ್ನು ಇವೆಲ್ಲವುಗಳಿಂದ ಪಾರುಮಾಡಿದರು.

12ಕ್ರಿಸ್ತಯೇಸುವಿನ ಅನುಯಾಯಿಯಾಗಿ ಭಕ್ತಿಯಿಂದ ಬಾಳಲು ಆಶಿಸುವ ಪ್ರತಿಯೊಬ್ಬನೂ ಹಿಂಸೆಗೊಳಗಾಗುತ್ತಾನೆ.

13ದುಷ್ಕರ್ಮಿಗಳು ಮತ್ತು ದುರ್ಬೋಧಕರು ಇತರರನ್ನು ವಂಚಿಸುತ್ತಾ ತಮ್ಮನ್ನೂ ವಂಚಿಸಿಕೊಳ್ಳುತ್ತಾ ದಿನೇದಿನೇ ಅಧೋಗತಿಗಿಳಿಯುತ್ತಾರೆ.

14ನೀನಾದರೋ ನಿನಗೆ ಬೋಧಿಸಲಾಗಿರುವ ಹಾಗೂ ನೀನು ದೃಢವಾಗಿ ನಂಬಿರುವ ಸತ್ಯಗಳನ್ನು ಅನುಸರಿಸು.

15ನಿನ್ನ ಬೋಧಕರು ಯಾರೆಂಬುದು ನಿನಗೆ ಗೊತ್ತಿದೆ. ಚಿಕ್ಕಂದಿನಿಂದಲೇ ನೀನು ಪವಿತ್ರಗ್ರಂಥವನ್ನು ಪರಿಚಯಮಾಡಿಕೊಂಡಿರುವೆ. ಯೇಸುಕ್ರಿಸ್ತರನ್ನು ವಿಶ್ವಾಸಿಸುವುದರ ಮೂಲಕ ಜೀವೋದ್ಧಾರವನ್ನು ಪಡೆಯಬಹುದೆಂಬ ಜ್ಞಾನವು ಲಭಿಸುವುದು ಆ ಪವಿತ್ರಗ್ರಂಥದಿಂದಲೇ.

16ಪವಿತ್ರಗ್ರಂಥ ದೈವಪ್ರೇರಣೆಯಿಂದ ರಚಿತವಾದುದು. ಆದ್ದರಿಂದ ಅದು ಪ್ರಬೋಧನೆಗೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧೆಗೂ ಉಪಯುಕ್ತವಾಗಿದೆ.

17ಅದರ ಮೂಲಕ ದೈವಭಕ್ತರು ಸಿದ್ಧರೂ ಸಕಲ ಸತ್ಕಾರ್ಯಗಳಿಗೆ ಸನ್ನದ್ಧರೂ ಆಗಬಲ್ಲರು.