ಹೊಸ ಒಡಂಬಡಿಕೆKNCL
1ಕೊನೆಯದಾಗಿ ಸಹೋದರರೇ, ನಮಗಾಗಿಯೂ ಪ್ರಾರ್ಥನೆಮಾಡಿ; ಪ್ರಭುವಿನ ಸಂದೇಶ ನಿಮ್ಮಲ್ಲಿ ಹಬ್ಬಿಹರಡಿದಂತೆ ಎಲ್ಲೆಲ್ಲಿಯೂ ಪಸರಿಸಿ ಪ್ರಖ್ಯಾತವಾಗಲಿ.
2ದುಷ್ಟರ ಹಾಗೂ ಕೆಡುಕರ ಬಲೆಗೆ ನಾವು ಬೀಳದಂತೆ ಪ್ರಾರ್ಥಿಸಿರಿ. ಏಕೆಂದರೆ, ವಿಶ್ವಾಸವೆಂಬುದು ಎಲ್ಲರಲ್ಲಿಯೂ ಇರುವುದಿಲ್ಲ.
3ಪ್ರಭು ವಿಶ್ವಾಸಕ್ಕೆ ಪಾತ್ರರು. ಅವರು ನಿಮ್ಮನ್ನು ಸದೃಢರನ್ನಾಗಿ ಮಾಡಿ ಕೇಡಿನಿಂದ ನಿಮ್ಮನ್ನು ಕಾಪಾಡುವರು.
4ನಾವು ನಿಮಗಿತ್ತ ಆಜ್ಞೆಗಳನ್ನು ಪಾಲಿಸಿಕೊಂಡು ಬರುತ್ತಿದ್ದೀರಿ; ಇನ್ನು ಮುಂದೆಯೂ ಪಾಲಿಸುತ್ತೀರಿ ಎಂದು ನಿಮ್ಮ ವಿಷಯವಾಗಿ ಪ್ರಭುವಿನಲ್ಲಿ ನಮಗೆ ಭರವಸೆಯಿದೆ.
5ದೇವರ ಪ್ರೀತಿಯನ್ನೂ ಕ್ರಿಸ್ತಯೇಸುವಿನ ಸಹನೆಯನ್ನೂ ನೀವು ಕಲಿತುಕೊಳ್ಳುವಂತೆ, ಪ್ರಭುವೇ ನಿಮ್ಮ ಅಂತರಂಗವನ್ನು ಬೆಳಗಿಸಲಿ.
6ಪ್ರಿಯ ಸಹೋದರರೇ, ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ ನಾವು ನಿಮಗೆ ಆಜ್ಞಾಪಿಸುವುದೇನೆಂದರೆ: ನಾವು ನಿಮಗೆ ಬೋಧಿಸಿದ ಸದಾಚಾರವನ್ನು ಪಾಲಿಸದೆ, ಮೈಗಳ್ಳತನದಿಂದ ದಿನಗಳೆಯುವ ಯಾವ ಸೋದರನೊಂದಿಗೂ ಸಂಪರ್ಕವಿಟ್ಟುಕೊಳ್ಳಬೇಡಿ.
7ನಾವು ಹೇಗೆ ನಡೆದುಕೊಂಡೆವೋ ಹಾಗೆಯೇ, ನೀವು ಸಹ ನಡೆದುಕೊಳ್ಳಬೇಕೆಂಬುದು ನಿಮಗೆ ತಿಳಿದ ವಿಷಯ. ನಾವು ನಿಮ್ಮ ಬಳಿಯಿದ್ದಾಗ ಸೋಮಾರಿಗಳಾಗಿರಲಿಲ್ಲ.
8ಪುಕ್ಕಟೆಯಾಗಿ ನಾವು ಯಾರ ಅನ್ನವನ್ನೂ ಉಣ್ಣಲಿಲ್ಲ. ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು ಹಗಲಿರುಳೂ ನಾವೇ ಕಷ್ಟಪಟ್ಟು ದುಡಿದಿದ್ದೇವೆ.
9ನಿಮ್ಮಿಂದ ಪೋಷಣೆ ಪಡೆಯಲು ನಮಗೆ ಹಕ್ಕಿಲ್ಲವೆಂದಲ್ಲ; ನೀವು ನಮ್ಮನ್ನು ಅನುಸರಿಸಿ ನಡೆಯುವಂತೆ, ನಿಮಗೆ ಆದರ್ಶವಾಗಿ ಇರಬೇಕೆಂದೇ ನಾವು ಹೀಗೆ ಮಾಡಿದೆವು.
10ನಾವು ನಿಮ್ಮೊಡನಿದ್ದಾಗ, “ದುಡಿಯಲೊಲ್ಲದವನು ಉಣಲೂಬಾರದು,” ಎಂದು ನಿಮಗೆ ಆಜ್ಞಾಪಿಸಿದ್ದೆವು.
11ಈಗಲಾದರೋ ನಿಮ್ಮಲ್ಲಿ ಕೆಲವರು ದುಡಿಯದೆ ಮೈಗಳ್ಳರಾಗಿ ಅಲ್ಲಲ್ಲಿ ಅಲೆದಾಡುತ್ತಾ ಹರಟೆಮಲ್ಲರಾಗಿದ್ದಾರೆಂದು ನಮಗೆ ತಿಳಿದುಬಂದಿದೆ.
12ಇಂಥವರು ತಮ್ಮ ಜೀವನೋಪಾಯಕ್ಕಾಗಿ ತಾವೇ ದುಡಿದು ಸಂಪಾದಿಸಬೇಕೆಂದು ಪ್ರಭು ಯೇಸುವಿನ ಹೆಸರಿನಲ್ಲಿ ಎಚ್ಚರಿಸಿ ಆಜ್ಞಾಪಿಸುತ್ತೇವೆ.
13ನೀವಾದರೋ ಸಹೋದರರೇ, ಸತ್ಕಾರ್ಯದ ಸಾಧನೆ ಸಾಕಾಯಿತೆಂದು ಹೇಳಿದಿರಿ.
14ಈ ಪತ್ರದ ಮೂಲಕ ನಾವು ಹೇಳಿರುವ ಮಾತನ್ನು ಯಾರಾದರೂ ಕೇಳದಿದ್ದರೆ, ಅಂಥವನನ್ನು ಗುರುತಿಸಿ ಅವನ ಸಹವಾಸವನ್ನೇ ತೊರೆದುಬಿಡಿ. ಹೀಗೆ ಮಾಡಿದರೆ, ಅವನಿಗೆ ನಾಚಿಕೆಯಾಗುವುದು.
15ಆದರೂ ಅವನನ್ನು ಶತ್ರುವೆಂದು ಭಾವಿಸದೆ, ಸಹೋದರನಂತೆ ಕಂಡು, ಬುದ್ಧಿಹೇಳಿರಿ.
16ಶಾಂತಿದಾತರಾದ ಪ್ರಭು ಎಲ್ಲ ಕಾಲಕ್ಕೂ ಎಲ್ಲ ವಿಧದಲ್ಲಿಯೂ ನಿಮಗೆ ಶಾಂತಿಯನ್ನು ದಯಪಾಲಿಸಲಿ. ಪ್ರಭು ನಿಮ್ಮೆಲ್ಲರೊಡನೆ ಇರಲಿ!
17ಪೌಲನೆಂಬ ನಾನು ಸ್ವತಃ ನನ್ನ ಕೈಯಿಂದಲೇ ಇದನ್ನು ಬರೆಯುತ್ತಿದ್ದೇನೆ. ನನ್ನ ಪ್ರತಿ ಪತ್ರಕ್ಕೂ, ನಾನು ಹಾಕುವ ಸಹಿ ಹಾಗು ನಾನು ಬರೆಯುವ ಧಾಟಿ ಇದೇ. ನಿಮಗೆ ನನ್ನ ಶುಭಾಶಯಗಳು!
18ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹ ನಿಮ್ಮೆಲ್ಲರೊಡನೆ ಇರಲಿ!