ಹಳೆಯ ಒಡಂಬಡಿಕೆKNCL

ಸಮುವೇಲನು ದ್ವಿತೀಯ ಭಾಗ 2

1ಅನಂತರ ದಾವೀದನು ಸರ್ವೇಶ್ವರನನ್ನು, “ನಾನು ಜುದೇಯ [1] ನಾಡಿನ ಯಾವುದಾದರೊಂದು ಪಟ್ಟಣಕ್ಕೆ ಹೋಗಬಹುದೇ?” ಎಂದು ಕೇಳಿದನು. “ಹೋಗಬಹುದು” ಎಂದರು ಸರ್ವೇಶ್ವರ. ಅವನು ಪುನಃ, “ಯಾವ ಊರಿಗೆ ಹೋಗಲಿ?” ಎಂದು ಕೇಳಿದ್ದಕ್ಕೆ, “ಹೆಬ್ರೋನಿಗೆ ಹೋಗು,” ಎಂಬ ಉತ್ತರ ಸಿಕ್ಕಿತು.

2ಆಗ ದಾವೀದನು ತನ್ನ ಇಬ್ಬರು ಹೆಂಡತಿಯರಾದ ಜೆಸ್ರೀಲಿನ ಅಹೀನೋವಮಳನ್ನು ಮತ್ತು ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳನ್ನೂ ಕರೆದುಕೊಂಡು ಅಲ್ಲಿಗೆ ಹೋದನು.

3ದಾವೀದನ ಜನರೂ ತಮ್ಮ ತಮ್ಮ ಕುಟುಂಬಗಳನ್ನು ಕರೆದುಕೊಂಡು ಅವನ ಜೊತೆಯಲ್ಲಿ ಹೋಗಿ ಹೆಬ್ರೋನಿಗೆ ಸೇರಿದ ಊರುಗಳಲ್ಲಿ ವಾಸಿಸಿದರು.

4ತರುವಾಯ ಯೆಹೂದ್ಯರು ಅಲ್ಲಿಗೆ ಬಂದು ದಾವೀದನನ್ನು ಅಭಿಷೇಕಿಸಿ ತಮ್ಮ ಕುಲಕ್ಕೆ ಅರಸನನ್ನಾಗಿ ಮಾಡಿಕೊಂಡರು. ಸೌಲನ ಶವವನ್ನು ಸಮಾಧಿಮಾಡಿದವರು ಯಾಬೇಷ್ ಗಿಲ್ಯಾದಿನವರೇ ಎಂಬ ಸಂಗತಿ ದಾವೀದನಿಗೆ ತಿಳಿಯಿತು.

5ಆಗ ಅವನು ಅವರ ಬಳಿಗೆ ದೂತರನ್ನು ಕಳುಹಿಸಿ, “ನೀವು ರಾಜನಿಷ್ಠೆಯಿಂದ ನಿಮ್ಮ ಒಡೆಯ ಸೌಲನ ಶವವನ್ನು ಸಮಾಧಿಮಾಡಿದ್ದಕ್ಕಾಗಿ ಸರ್ವೇಶ್ವರನ ಆಶೀರ್ವಾದ ನಿಮಗೆ ಲಭಿಸಲಿ!

6ಅವರ ಅಚಲ ಪ್ರೀತಿಸತ್ಯತೆಗಳು ನಿಮ್ಮೊಂದಿಗಿರಲಿ! ಈ ಸತ್ಕಾರ್ಯಕ್ಕಾಗಿ ನಾನೂ ನಿಮಗೆ ಉಪಕಾರ ಮಾಡುವೆನು.

7ಯೆಹೂದ್ಯರು ನನ್ನನ್ನು ಅಭಿಷೇಕಿಸಿ ತಮ್ಮ ಅರಸನನ್ನಾಗಿ ಮಾಡಿಕೊಂಡಿದ್ದಾರೆ. ಆದುದರಿಂದ ಸೌಲನು ಸತ್ತುಹೋಗಿದ್ದರೂ ನೀವು ಶೂರರಾಗಿರಿ; ನಿಮ್ಮ ಕೈಗಳು ಜೋಲುಬೀಳದಿರಲಿ,” ಎಂದು ಹೇಳಿಸಿದನು.

8ಸೌಲನ ಸೇನಾಪತಿ ಹಾಗು ನೇರನ ಮಗನಾದ ಅಬ್ನೇರನು ಸೌಲನ ಮಗನಾದ ಈಷ್ಬೋಶೆತನನ್ನು ನದಿಯ ಆಚೆಯಲ್ಲಿರುವ ಮಹನಯಿಮಿಗೆ ಕರೆದೊಯ್ದನು.

9ಗಿಲ್ಯಾದ್, ಆಶೇರ್, ಜೆಸ್ರೀಲ್, ಎಫ್ರಯಿಮ್, ಬೆನ್ಯಾಮೀನ್ ಇವುಗಳ ಜನರ ಮೇಲೆ ಮತ್ತು ಬೇರೆ ಎಲ್ಲ ಇಸ್ರಯೇಲರ ಮೇಲೆ ಅವನನ್ನು ಅರಸನನ್ನಾಗಿ ಮಾಡಿದನು.

10(ಸೌಲನ ಮಗನಾದ ಈಷ್ಬೋಶೆತನಿಗೆ ಆಗ ನಾಲ್ವತ್ತು ವರ್ಷ. ಇಸ್ರಯೇಲರನ್ನು ಆತ ಎರಡು ವರ್ಷ ಆಳಿದನು).ಯೆಹೂದ್ಯರು ಮಾತ್ರ ದಾವೀದನನ್ನೇ ಹಿಂಬಾಲಿಸಿದರು.

11ದಾವೀದನು ಹೆಬ್ರೋನಿನಲ್ಲಿ ಯೆಹೂದ್ಯರ ಅರಸನಾಗಿ ಏಳು ವರ್ಷ ಆರು ತಿಂಗಳು ರಾಜ್ಯವಾಳಿದನು.

12ಒಂದು ದಿನ ನೇರನ ಮಗ ಅಬ್ನೇರನು ಮತ್ತು ಸೌಲನ ಮಗ ಈಷ್ಬೋಶೆತನ ಸೇವಕರು ಮಹನಯಿಮಿನಿಂದ ಹೊರಟು ಗಿಬ್ಯೋನಿಗೆ ಬಂದರು.

13ಚೆರೂಯಳ ಮಗ ಯೋವಾಬನು ಮತ್ತು ದಾವೀದನ ಸೇವಕರು ಹೊರಟು ಅವರನ್ನು ಗಿಬ್ಯೋನಿನ ಕೆರೆಯ ಹತ್ತಿರ ಸಂಧಿಸಿದರು. ಇವರು ಕೆರೆಯ ಈಚೆ, ಅವರು ಕೆರೆಯ ಆಚೆ ಕುಳಿತುಕೊಂಡರು.

14ಆಗ ಅಬ್ನೇರನು ಯೋವಾಬನಿಗೆ, “ಎರಡು ಕಡೆಯ ತರುಣರು ಎದ್ದುಬಂದು ನಮ್ಮ ಮುಂದೆ ದ್ವಂದ್ವಯುದ್ಧ ಮಾಡಲಿ,” ಎಂದು ಹೇಳಿದನು. ಯೋವಾಬನು ಅದಕ್ಕೆ ಒಪ್ಪಿಕೊಂಡನು.

15ಆಗ ಸೌಲನ ಮಗ ಈಷ್ಬೋಶೆತನ ಕಡೆಯವರಾದ ಹನ್ನೆರಡು ಮಂದಿ ಬೆನ್ಯಾಮೀನ್ಯರು, ಮತ್ತು ದಾವೀದನ ಸೇವಕರಲ್ಲಿ ಹನ್ನೆರಡು ಮಂದಿ ಸಮಸಂಖ್ಯೆಯಾಗಿ ಹೊರಟು ದ್ವಂದ್ವಯುದ್ಧ ಮಾಡಿದರು.

16ಅವರಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಎದುರಾಳಿಯ ತಲೆ ಹಿಡಿದು ಕತ್ತಿಯಿಂದ ಪಕ್ಕೆಯನ್ನು ತಿವಿದುದರಿಂದ ಎಲ್ಲರೂ ಸತ್ತುಬಿದ್ದರು. ಆದುದರಿಂದ ಗಿಬ್ಯೋನಿನಲ್ಲಿರುವ ಆ ಸ್ಥಳಕ್ಕೆ ‘ಹದಗತ್ತಿ ಕ್ಷೇತ್ರ’ ಎಂದು ಹೆಸರಾಯಿತು.

17ಅನಂತರ ಆ ದಿವಸ ಘೋರಯುದ್ಧ ನಡೆಯಿತು. ಅಬ್ನೇರನನ್ನೂ ಇಸ್ರಯೇಲರನ್ನೂ ದಾವೀದನ ಸೇವಕರು ಸೋಲಿಸಿದರು.

18ಚೆರೂಯಳ ಮೂರು ಮಂದಿ ಮಕ್ಕಳಾದ ಯೋವಾಬ್, ಅಬೀಷೈ, ಅಸಾಹೇಲ್ ಎಂಬುವರು ಅಲ್ಲಿಗೆ ಬಂದಿದ್ದರು. ಅಸಾಹೇಲನು ಅಡವಿಯ ಜಿಂಕೆಯಂತೆ ಚುರುಕು ಕಾಲಿನವನಾಗಿದ್ದನು.

19ಇವನು ಎಡಕ್ಕಾದರೂ ಬಲಕ್ಕಾದರೂ ತಿರುಗದೆ ಅಬ್ನೇರನನ್ನು ಹಿಂದಟ್ಟಿದನು.

20ಅಬ್ನೇರನು ಹಿಂದಿರುಗಿ ನೋಡಿ, “ನೀನು ಅಸಾಹೇಲನೋ?’ ಎಂದು ಕೇಳಿದ್ದಕ್ಕೆ ಅವನು, “ಹೌದು” ಎಂದು ಉತ್ತರಕೊಟ್ಟನು.

21ಆಗ ಅಬ್ನೇರನು, “ನನ್ನನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಿಕೊಂಡು ಯುವಕರಲ್ಲೊಬ್ಬನನ್ನು ಹಿಡಿದು, ಸುಲಿದುಕೋ,” ಎಂದು ಹೇಳಿದನು. ಆದರೆ ಅಸಾಹೇಲನು ಒಪ್ಪಲಿಲ್ಲ.

22ಮತ್ತೊಮ್ಮೆ ಅಬ್ನೇರನು, “ನನ್ನನ್ನು ಬಿಟ್ಟುಹೋಗು; ನಿನ್ನನ್ನು ಕೊಲ್ಲಲು ನನ್ನನ್ನೇಕೆ ಒತ್ತಾಯಿಸುವೆ? ಹಾಗೆ ಕೊಂದರೆ ನಿನ್ನ ಅಣ್ಣನಾದ ಯೋವಾಬನಿಗೆ ಹೇಗೆ ತಾನೆ ಮುಖ ತೋರಿಸಲಿ,” ಎಂದನು.

23ಆದರೂ ಅಸಾಹೇಲನು ಬಿಟ್ಟುಹೋಗುವುದಕ್ಕೆ ಒಪ್ಪಲಿಲ್ಲ. ಆದಕಾರಣ ಅಬ್ನೇರನು ಭರ್ಜಿಯನ್ನು ಹಿಮ್ಮುಖವಾಗಿ ಎಸೆದು ಅವನ ಹೊಟ್ಟೆಯನ್ನು ತಿವಿದನು. ಆ ಭರ್ಜಿ ಅವನ ಬೆನ್ನಿನಿಂದ ಹಾಯ್ದು ಬಂದಿತು. ಅವನು ಕೂಡಲೇ ಅಲ್ಲೇ ಬಿದ್ದು ಸತ್ತನು. ಅಸಾಹೇಲನು ಸತ್ತುಬಿದ್ದ ಸ್ಥಳಕ್ಕೆ ಬಂದವರೆಲ್ಲರೂ ಅಲ್ಲೇ ನಿಂತರು.

24ಆದರೆ ಯೋವಾಬನೂ ಅಬೀಷೈಯೂ ಅಬ್ನೇರನನ್ನು ಹಿಂದಟ್ಟಿದರು. ಹೀಗೆ ಅವರು ‘ಅಮ್ಮಾ’ ಎಂಬ ಗುಡ್ಡಕ್ಕೆ ಬರುವಷ್ಟರಲ್ಲಿ ಸೂರ್ಯಾಸ್ತಮವಾಯಿತು. ಆ ಗುಡ್ಡ ಗಿಬ್ಯೋನ್ ಮರುಭೂಮಿ ಮಾರ್ಗದ ಬಳಿಯಲ್ಲಿರುವ ಗೀಯದ ಎದುರಿನಲ್ಲಿದೆ.

25ಬೆನ್ಯಾಮೀನ್ಯರು ಒಂದೇ ಗುಂಪು ಆಗಿ ಕೂಡಿಕೊಂಡು ಅಬ್ನೇರನ ಬಳಿಗೆ ಬಂದು ಗುಡ್ಡದ ಮೇಲೆ ನಿಂತರು.

26ಆಗ ಅಬ್ನೇರನು ಯೋವಾಬನನ್ನು ನೋಡಿ, “ಕತ್ತಿ ಯಾವಾಗಲೂ ತಿನ್ನುತ್ತಲೇ ಇರಬೇಕೇ? ಹಗೆತನವೇ ಇದರ ಅಂತ್ಯಫಲವೆಂದು ನಿನಗೆ ಗೊತ್ತಾಗಲಿಲ್ಲವೇ? ಸಹೋದರರನ್ನು ಹಿಂದಟ್ಟುವುದು ಸಾಕೆಂದು ನಿನ್ನ ಜನರಿಗೆ ಯಾವಾಗ ಆಜ್ಞಾಪಿಸುವೆ?” ಎಂದನು.

27ಅದಕ್ಕೆ ಯೋವಾಬನು, “ದೇವರ ಜೀವದಾಣೆ, ಈಗ ನೀನು ಈ ಮಾತುಗಳನ್ನು ಹೇಳದಿದ್ದರೆ, ಜನರು ನಾಳೆ ಬೆಳಗಾಗುವವರೆಗೆ ತಮ್ಮ ದೇಶಬಾಂಧವರನ್ನು ಹಿಂದಟ್ಟದೆ ಬಿಡುತ್ತಿರಲಿಲ್ಲ,” ಎಂದು ಉತ್ತರಕೊಟ್ಟನು.

28ಕೂಡಲೆ ತುತೂರಿಯನ್ನು ಊದಿಸಿದನು. ಆಗ ಜನರು ಇಸ್ರಯೆಲರನ್ನು ಹಿಂದಟ್ಟದೆ ಬಿಟ್ಟರು. ಯುದ್ಧವು ನಿಂತುಹೋಯಿತು.

29ಅಬ್ನೇರನೂ ಅವನ ಜನರೂ ಅರಾಬಾ ಕಣಿವೆಯಲ್ಲಿ ರಾತ್ರಿಯೆಲ್ಲಾ ಪ್ರಯಾಣಮಾಡಿ ಜೋರ್ಡನ್ ನದಿದಾಟಿ ಬಿಥ್ರೋನ್ ಕಣಿವೆಯನ್ನು ಹಾಯ್ದು ಮಹನಯಿಮಿಗೆ ಸೇರಿದರು.

30ಯೋವಾಬನು ಅಬ್ನೇರನನ್ನು ಬೆನ್ನಟ್ಟದೆ ಹಿಂದೆ ತಿರುಗಿ ಬಂದು, ಜನರನ್ನು ಕೂಡಿಸಿ ಲೆಕ್ಕಿಸಿದಾಗ ಅವರಲ್ಲಿ ದಾವೀದನ ಹತ್ತೊಂಬತ್ತು ಮಂದಿ ಯೋಧರು ಮತ್ತು ಅಸಾಹೇಲನು ಇರಲಿಲ್ಲ.

31ಆದರೆ ದಾವೀದನ ಯೋಧರು ಅಬ್ನೇರನ ಜನರಾದ ಬೆನ್ಯಾಮೀನ್ಯರಲ್ಲಿ ಮುನ್ನೂರರ್ವತ್ತು ಮಂದಿಯನ್ನು ಕೊಂದಿದ್ದರು.

32ಅವರು ಅಸಾಹೇಲನ ಶವವನ್ನು ತಂದು ಅದನ್ನು ಬೆತ್ಲೆಹೇಮಿನಲ್ಲಿರುವ ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅನಂತರ ಯೋವಾಬನೂ ಅವನ ಜನರೂ ರಾತ್ರಿಯೆಲ್ಲಾ ಪ್ರಯಾಣಮಾಡಿ ಹೆಬ್ರೋನಿಗೆ ಬಂದರು. ಆಗ ಸೂರ್ಯೋದಯವಾಗಿತ್ತು.