ಹೊಸ ಒಡಂಬಡಿಕೆKNCL

ಯೊವಾನ್ನನು ಬರೆದ ಎರಡನೆಯ ಪತ್ರ 1

1ದೇವರಿಂದ ಆಯ್ಕೆಯಾದ ಶ್ರೀಮಾತೆಗೂ ಆಕೆಯ ಮಕ್ಕಳಿಗೂ - ಸಭಾಹಿರಿಯನಾದ ನಾನು ಬರೆಯುವ ಪತ್ರ.

2ನಮ್ಮಲ್ಲಿ ನೆಲೆಗೊಂಡಿರುವ ಹಾಗೂ ನಮ್ಮಲ್ಲಿ ಶಾಶ್ವತವಾಗಿರುವ ಸತ್ಯದ ಪ್ರಯುಕ್ತ ನಾನು ಮತ್ತು ಸತ್ಯವನ್ನು ಅರಿತಿರುವ ಎಲ್ಲರು ನಿಮ್ಮಲ್ಲಿ ಪ್ರೀತಿಯನ್ನಿಟ್ಟಿದ್ದೇವೆ.

3ಪಿತನಾದ ದೇವರಿಂದಲೂ ಅವರ ಪುತ್ರ ಯೇಸುಕ್ರಿಸ್ತರಿಂದಲೂ ಕೃಪೆ, ಕರುಣೆ, ಶಾಂತಿ, ಸಮಾಧಾನಗಳು ಸತ್ಯಪೂರ್ವಕವಾಗಿಯೂ ಪ್ರೀತಿಪೂರ್ವಕವಾಗಿಯೂ ನಮ್ಮಲ್ಲಿ ನೆಲೆಸಲಿ!

4ನಿನ್ನ ಮಕ್ಕಳಲ್ಲಿ ಕೆಲವರು ಪಿತನು ವಿಧಿಸಿದಂತೆ ಸತ್ಯಸಂಧರಾಗಿ ನಡೆಯುವುದನ್ನು ಕಂಡು ನನಗಾದ ಆನಂದ ಅಷ್ಟಿಷ್ಟಲ್ಲ.

5ಶ್ರೀಮಾತೆಯೇ, ನಾನು ಮಾಡುವ ಬಿನ್ನಹವಿದು: ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದು ಮೊತ್ತಮೊದಲಿನಿಂದಲೂ ನಮಗೆ ಕೊಡಲಾದ ಆಜ್ಞೆಯೇ ಹೊರತು ಹೊಸದೇನೂ ಅಲ್ಲ.

6ದೇವರ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ ಪ್ರೀತಿ. ಪ್ರೀತಿಮಾರ್ಗದಲ್ಲಿ ನಡೆಯಬೇಕೆಂಬುದೇ ನೀವು ಮೊತ್ತಮೊದಲಿನಿಂದಲೂ ಕೇಳಿರುವ ಆಜ್ಞೆ.

7ಅನೇಕ ಮಂದಿ ವಂಚಕರು ಲೋಕದಲ್ಲಿ ತಲೆದೋರಿದ್ದಾರೆ. ಯೇಸುಕ್ರಿಸ್ತರು ಮನುಷ್ಯ ಆಗಿಬಂದರೆಂಬುದನ್ನು ಇವರು ಒಪ್ಪಿಕೊಳ್ಳುವುದಿಲ್ಲ. ಇಂಥವನು ವಂಚಕನೂ ಕ್ರಿಸ್ತವಿರೋಧಿಯೂ ಹೌದು.

8ನಿಮ್ಮ ದುಡಿಮೆಯ ಫಲವನ್ನು ಕಳೆದುಕೊಳ್ಳದೆ ಅದನ್ನು ಪೂರ್ಣವಾಗಿ ಪಡೆಯುವಂತೆ ನೀವು ಎಚ್ಚರಿಕೆ ವಹಿಸಬೇಕು.

9ಕ್ರಿಸ್ತಯೇಸುವಿನ ಉಪದೇಶದಲ್ಲಿ ನೆಲೆಸದೆ ಅದರ ಎಲ್ಲೆಮೀರಿ ನಡೆಯುವವನಲ್ಲಿ ದೇವರು ಇರುವುದಿಲ್ಲ. ಆ ಉಪದೇಶದಲ್ಲಿ ನೆಲೆಸಿರುವವನಲ್ಲಿ ಪಿತ ಮತ್ತು ಪುತ್ರ ಇಬ್ಬರೂ ಇರುತ್ತಾರೆ.

10ಈ ಉಪದೇಶವನ್ನು ಒಪ್ಪದಿರುವ ಯಾವನಾದರೂ ನಿಮಗೆ ಉಪದೇಶಮಾಡಬಂದರೆ, ಮನೆಯೊಳಗೆ ಸೇರಿಸಬೇಡಿ; ಅವನನ್ನು ಹರಸಲೂಬೇಡಿ.

11ಏಕೆಂದರೆ, ಹರಸುವವನು ಅವನ ದುಷ್ಕೃತ್ಯಗಳಲ್ಲಿ ಪಾಲುಗಾರನಾಗುತ್ತಾನೆ.

12ನಾನು ನಿಮಗೆ ತಿಳಿಸಬೇಕಾದ ವಿಷಯಗಳು ಬಹಳಷ್ಟಿವೆ. ಆದರೆ ಅವುಗಳನ್ನು ಕಾಗದಪತ್ರಗಳ ಮೂಲಕ ತಿಳಿಸಲು ನನಗೆ ಇಷ್ಟವಿಲ್ಲ. ನಾನೇ ನಿಮ್ಮಲ್ಲಿಗೆ ಬಂದು ನಿಮ್ಮ ಸಂಗಡ ಮಾತನಾಡುವ ನಿರೀಕ್ಷೆ ಇದೆ. ಹೀಗೆ ಮುಖಾಮುಖಿಯಾಗಿ ಮಾತನಾಡುವುದರಿಂದ ಪೂರ್ಣಸಂತೋಷವೂ ಆಗುತ್ತದೆ.

13ದೇವರಿಂದ ಆಯ್ಕೆಯಾದ ನಿನ್ನ ಸಹೋದರಿಯ ಮಕ್ಕಳು ನಿನಗೆ ನಮಸ್ಕಾರ ಹೇಳಿದ್ದಾರೆ.