ಹೊಸ ಒಡಂಬಡಿಕೆKNCL

ಪೌಲನು ಥೆಸಲೋನಿಯರಿಗೆ ಬರೆದ ಮೊದಲನೆಯ ಪತ್ರ 5

1ಸಹೋದರರೇ, ಇದೆಲ್ಲ ನಡೆಯಲಿರುವ ಸಮಯ ಸಂದರ್ಭಗಳನ್ನು ಕುರಿತು ನಿಮಗೆ ಬರೆಯುವ ಅವಶ್ಯಕತೆಯಿಲ್ಲ.

2ರಾತ್ರಿಯಲ್ಲಿ ಕಳ್ಳನು ಬರುವ ಹಾಗೆ ಪ್ರಭುವಿನ ದಿನವು ಬರುವುದೆಂದು ನೀವು ಚೆನ್ನಾಗಿ ಬಲ್ಲಿರಿ.

3ಎಲ್ಲವೂ ಶಾಂತ, ಸುಭದ್ರವೆಂದು ಜನರು ಎಣಿಸುತ್ತಿರುವಾಗಲೇ, ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ, ವಿನಾಶವು ಫಕ್ಕನೆ ಅವರ ಮೇಲೆ ಬಂದೆರಗುವುದು. ಇದರಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ.

4ಸಹೋದರರೇ, ಕಳ್ಳನಂತೆ ಆ ದಿನವು ನಿಮ್ಮನ್ನು ದಿಗ್ಭ್ರಮೆಗೊಳಿಸದಿರಲಿ. ಏಕೆಂದರೆ, ನೀವಿನ್ನು ಅಂಧಕಾರಕ್ಕೆ ಸೇರಿದವರಲ್ಲ. ಆ ದಿನವು ದಿಢೀರನೆ ನಿಮ್ಮ ಮೇಲೆ ಬರಬಾರದು.

5ನೀವೆಲ್ಲರೂ ಬೆಳಕಿನ ಹಾಗೂ ಹಗಲಿನ ಮಕ್ಕಳು. ನಾವು ಕತ್ತಲೆಗಾಗಲಿ, ರಾತ್ರಿಗಾಗಲಿ ಸೇರಿದವರಲ್ಲ.

6ಅಂದ ಮೇಲೆ, ಇತರರಂತೆ ನಾವು ನಿದ್ದೆಮಾಡದೆ ಎಚ್ಚರವಾಗಿದ್ದು ಸ್ವಸ್ಥಚಿತ್ತರಾಗಿ ವರ್ತಿಸೋಣ.

7ನಿದ್ರೆಯೂ ಕುಡುಕತನವೂ ರಾತ್ರಿಗೆ ಸಂಬಂಧಿಸಿದವುಗಳು.

8ನಾವು ಹಗಲಿಗೆ ಸೇರಿದವರಾದುದರಿಂದ ಸ್ವಸ್ಥಚಿತ್ತದಿಂದ ಇರೋಣ. ವಿಶ್ವಾಸ ಹಾಗೂ ಪ್ರೀತಿ ನಮಗೆ ವಕ್ಷಕವಚವಾಗಬೇಕು. ಜೀವೋದ್ಧಾರದ ನಿರೀಕ್ಷೆ ನಮಗೆ ಶಿರಸ್ತ್ರಾಣವಾಗಿರಬೇಕು.

9ಕೋಪಾಗ್ನಿಗೆ ನಾವು ಗುರಿಯಾಗಬೇಕೆಂದಲ್ಲ, ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ನಾವು ಜೀವೋದ್ಧಾರ ಹೊಂದಬೇಕೆಂಬುದೇ ದೈವೇಚ್ಛೆ.

10ಯೇಸುಕ್ರಿಸ್ತರು ಮರಳಿ ಬರುವಾಗ, ನಾವು ಮೃತರಾಗಿದ್ದರೂ ಜೀವಂತವಾಗಿದ್ದರೂ ಅವರೊಡನೆಯೇ ನಾವು ಜೀವಿಸಬೇಕೆಂದೆ ನಮಗಾಗಿ ಅವರು ಸಾವನ್ನಪ್ಪಿದರು.

11ಆದುದರಿಂದ ನೀವು ಈಗ ನಡೆದುಕೊಳ್ಳುತ್ತಿರುವಂತೆ, ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ, ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಗೊಳಿಸಿರಿ.

12ಸಹೋದರರೇ, ನಿಮ್ಮೊಡನೆ ದುಡಿಯುತ್ತಾ ಪ್ರಭುವಿನ ಹೆಸರಿನಲ್ಲಿ ನಿಮಗೆ ಅಧಿಕಾರಿಗಳೂ ಮಾರ್ಗದರ್ಶಕರೂ ಆಗಿರುವವರಿಗೆ ತಕ್ಕ ಸನ್ಮಾನವನ್ನು ಸಲ್ಲಿಸಿರಿ.

13ಅವರು ನಿರ್ವಹಿಸುವ ಕಾರ್ಯದ ನಿಮಿತ್ತ ಅವರನ್ನು ಅತ್ಯಧಿಕ ಪ್ರೀತಿಯಿಂದ ಗೌರವಿಸಿರಿ. ನಿಮ್ಮನಿಮ್ಮೊಳಗೆ ಸಮಾಧಾನದಿಂದಿರಿ.

14ಸಹೋದರರೇ, ಮೈಗಳ್ಳರಿಗೆ ಬುದ್ಧಿಹೇಳಿರಿ; ಮನಗುಂದಿದವರಿಗೆ ಧೈರ್ಯ ತುಂಬಿರಿ; ದುರ್ಬಲರಿಗೆ ನೆರವಾಗಿರಿ; ಎಲ್ಲರೊಡನೆ ಸಹನೆಯಿಂದಿರಿ. ಇದು ನಮ್ಮ ಪ್ರಬೋಧನೆ.

15ಕೆಡುಕಿಗೆ ಪ್ರತಿಯಾಗಿ ಕೆಡುಕು ಮಾಡದೆ ಎಚ್ಚರದಿಂದಿರಿ. ಯಾವಾಗಲೂ ಒಬ್ಬರಿಗೊಬ್ಬರು ಮಾತ್ರವಲ್ಲದೆ ಎಲ್ಲರಿಗೂ ಹಿತವನ್ನೇ ಮಾಡಿರಿ.

16ಸದಾ ಹರ್ಷಚಿತ್ತರಾಗಿರಿ.

17ಎಡೆಬಿಡದೆ ಪ್ರಾರ್ಥಿಸಿರಿ.

18ಎಲ್ಲಾ ಸಂದರ್ಭಗಳಲ್ಲೂ ಉಪಕಾರಸ್ಮರಣೆಮಾಡಿರಿ. ಕ್ರಿಸ್ತಯೇಸುವಿನಲ್ಲಿ ದೇವರು ನಿಮ್ಮಿಂದ ಇಚ್ಛಿಸುವುದು ಇದನ್ನೇ.

19ಪವಿತ್ರಾತ್ಮರನ್ನು ನಿಶ್ಚೇತನಗೊಳಿಸಬೇಡಿ.

20ಪ್ರವಾದನೆಗಳನ್ನು ಅಲ್ಲಗಳೆಯದಿರಿ.

21ಅವುಗಳನ್ನೆಲ್ಲಾ ಪರಿಶೋಧಿಸಿ ಒಳ್ಳೆಯದನ್ನು ಅಂಗೀಕರಿಸಿ,

22ಕೆಟ್ಟದ್ದನ್ನೆಲ್ಲಾ ಬಿಟ್ಟುಬಿಡಿ.

23ಶಾಂತಿದಾಯಕ ದೇವರು ನಿಮ್ಮನ್ನು ಪೂರ್ಣವಾಗಿ ಪಾವನಗೊಳಿಸಲಿ. ನಮ್ಮ ಪ್ರಭು ಯೇಸು ಪುನರಾಗಮಿಸುವಾಗ ನಿಮ್ಮ ಆತ್ಮ, ಪ್ರಾಣ, ದೇಹ - ಇವುಗಳು ದೋಷರಹಿತವಾಗಿಯೂ ಸ್ವಸ್ಥವಾಗಿಯೂ ಇರುವಂತೆ ನಿಮ್ಮನ್ನು ಕಾಪಾಡಲಿ.

24ನಿಮ್ಮನ್ನು ಕರೆದ ದೇವರು ಇದನ್ನು ಈಡೇರಿಸುವರು; ಏಕೆಂದರೆ, ದೇವರು ನಂಬಿಕಸ್ಥರು.

25ಸಹೋದರರೇ, ನಮಗಾಗಿಯೂ ಪ್ರಾರ್ಥಿಸಿರಿ.

26ಪವಿತ್ರವಾದ ಮುದ್ದಿಟ್ಟು ಸಹೋದರರೆಲ್ಲರನ್ನು ವಂದಿಸಿರಿ.

27ಈ ಪತ್ರವನ್ನು ಎಲ್ಲ ಸಹೋದರರಿಗೂ ಓದಿಹೇಳಬೇಕೆಂದು ಪ್ರಭುವಿನ ಹೆಸರಿನಲ್ಲಿ ವಿಧಿಸುತ್ತಿದ್ದೇನೆ.

28ನಮ್ಮ ಪ್ರಭುವಾದ ಯೇಸುಕ್ರಿಸ್ತರ ಅನುಗ್ರಹ ನಿಮ್ಮಲ್ಲಿರಲಿ!