ಹೊಸ ಒಡಂಬಡಿಕೆKNCL
1ಅನ್ಯಜನರಲ್ಲಿ ಕೂಡ ಇಲ್ಲದಂಥ ದುರ್ನಡತೆ ನಿಮ್ಮಲ್ಲಿದೆಯೆಂಬುದಾಗಿ ವರದಿ ಬಂದಿದೆ. ನಿಮ್ಮಲ್ಲಿ ಒಬ್ಬನು ತನ್ನ ತಂದೆಯ ಪತ್ನಿಯನ್ನೇ ಇಟ್ಟುಕೊಂಡಿದ್ದಾನಂತೆ.
2ಹೀಗಿರಲು, ನೀವು ಸೊಕ್ಕಿನಿಂದ ಮೆರೆಯಲು ಕಾರಣವಾದರೂ ಎಲ್ಲಿದೆ? ಬದಲಿಗೆ, ನೀವು ವ್ಯಸನಪಟ್ಟು ಅವನನ್ನು ನಿಮ್ಮ ಸಭಾಕೂಟದಿಂದ ಬಹಿಷ್ಕರಿಸಬೇಕಾಗಿತ್ತಲ್ಲವೆ?
3ನಾನು ಶಾರೀರಿಕವಾಗಿ ನಿಮ್ಮಿಂದ ದೂರವಿದ್ದರೂ ಆತ್ಮಿಕವಾಗಿ ನಿಮ್ಮ ಹತ್ತಿರವಿದ್ದೇನೆ. ನಿಮ್ಮ ಸಂಗಡವೇ ಇರುವವನಂತೆ ಅವನಿಗೆ ಏನುಮಾಡಬೇಕೆಂದು ಈಗಾಗಲೇ ತೀರ್ಮಾನಿಸಿದ್ದೇನೆ.
4ಅದೇನೆಂದರೆ: ನೀವು ಸಭೆಸೇರಿ, ಪ್ರಭು ಯೇಸುವಿನ ಶಕ್ತಿಯ ಆಧಾರದ ಮೇಲೆ ಅವನನ್ನು ಸೈತಾನನಿಗೆ ಒಪ್ಪಿಸಿಬಿಡಬೇಕು. ನಾನು ಆತ್ಮಿಕವಾಗಿ ನಿಮ್ಮ ಮಧ್ಯೆಯಿರುತ್ತೇನೆ.
5ಅವನ ದೇಹವು ದಂಡನೆಗೊಳಗಾದರೂ ಅವನ ಆತ್ಮ ಪ್ರಭು ಯೇಸುವಿನ ದಿನದಂದು ಉದ್ಧಾರವಾಗುವಂತೆ ಹೀಗೆ ಮಾಡಬೇಕು.
6ನೀವು ಜಂಬ ಕೊಚ್ಚಿಕೊಳ್ಳುವುದು ತರವಲ್ಲ. ಒಂದಿಷ್ಟು ಹುಳಿ, ಹಿಟ್ಟನ್ನೆಲ್ಲಾ ಹುದುಗೆಬ್ಬಿಸುತ್ತದೆಂಬುದನ್ನು ನೀವು ಚೆನ್ನಾಗಿ ಬಲ್ಲಿರಿ.
7ನೀವು ಹುಳಿಯಿಲ್ಲದ ಕಣಕವಾಗಿದ್ದೀರಿ. ಅಪ್ಪಟ ರೊಟ್ಟಿಯಾಗುವಂತೆ ಹುಳಿಯನ್ನು ತೆಗೆದುಹಾಕಿರಿ. ಏಕೆಂದರೆ, ಪಾಸ್ಕ ಯಜ್ಞದ ಕುರಿಮರಿಯಾದ ಕ್ರಿಸ್ತಯೇಸು ಬಲಿಯಾಗಿದ್ದಾರೆ.
8ಆದಕಾರಣ ನಾವು ದುಷ್ಟತನ, ಕೆಡುಕುತನವೆಂಬ ಹುಳಿಹಿಟ್ಟನ್ನು ವರ್ಜಿಸೋಣ. ಪರಿಶುದ್ಧತೆ ಮತ್ತು ಸತ್ಯತೆ ಎಂಬ ಹುಳಿಯಿಲ್ಲದ ಹೊಸರೊಟ್ಟಿಯನ್ನು ತಿಂದು ಪಾಸ್ಕಹಬ್ಬವನ್ನು ಆಚರಿಸೋಣ.
9ದುರಾಚಾರಿಗಳ ಸಹವಾಸ ನಿಮಗೆ ಸಲ್ಲದು, ಎಂದು ನಾನು ಬರೆದಿದ್ದೆ.
10ಅಂದರೆ, ಈ ಲೋಕದಲ್ಲಿರುವ ದುರಾಚಾರಿಗಳು, ಲೋಭಿಗಳು, ಸುಲಿಗೆಗಾರರು, ವಿಗ್ರಹಾರಾಧಕರು - ಇಂಥವರ ಸಹವಾಸವನ್ನು ಬಿಟ್ಟುಬಿಡಬೇಕೆಂಬುದು ನನ್ನ ಮಾತಿನ ಅರ್ಥವಲ್ಲ. ಹಾಗೆ ಮಾಡಿದರೆ ನೀವು ಈ ಲೋಕವನ್ನೇ ಬಿಟ್ಟುಹೋಗಬೇಕಾದೀತು.
11ಆದರೆ ತಾನು ಕ್ರೈಸ್ತ ಸಹೋದರ ಎನಿಸಿಕೊಂಡು, ದುರಾಚಾರಿಯಾಗಿಯೋ ಲೋಭೀಯಾಗಿಯೋ ವಿಗ್ರಹಾರಾಧಕನಾಗಿಯೋ ಪರನಿಂದಕನಾಗಿಯೋ ಕುಡುಕನಾಗಿಯೋ ಸುಲಿಗೆಗಾರನಾಗಿಯೋ ಯಾರಾದರೂ ಇದ್ದರೆ, ಅಂಥವನ ಸಹವಾಸ ನಿಮಗೆ ಸಲ್ಲದು. ಇದು ನನ್ನ ಪತ್ರದ ಉದ್ದೇಶ.
12ಧರ್ಮಸಭೆಗೆ ಸೇರದೆ ಇರುವವರ ಬಗ್ಗೆ ತೀರ್ಪುಮಾಡುವುದು ನನ್ನ ಕೆಲಸವಲ್ಲ. ಅವರನ್ನು ಕುರಿತು ದೇವರೇ ತೀರ್ಪುನೀಡುವರು. ನೀವು ತೀರ್ಪುಮಾಡಬೇಕಾದುದು ಧರ್ಮಸಭೆಗೆ ಸೇರಿದವರನ್ನು ಕುರಿತು ದುರುಳನನ್ನು ನಿಮ್ಮಿಂದ ದೂರತಳ್ಳಿರಿ.