ಹಳೆಯ ಒಡಂಬಡಿಕೆKNCL
1ಮರುವರ್ಷ, ಅರಸರು ಯುದ್ಧಕ್ಕೆ ಹೊರಡುವ ಕಾಲದಲ್ಲಿ ಯೋವಾಬನು ಅಮ್ಮೋನಿಯರ ಪ್ರಾಂತ್ಯಗಳನ್ನು ಹಾಳುಮಾಡಿ ರಬ್ಬಕ್ಕೆ ಮುತ್ತಿಗೆ ಹಾಕಿದನು. ಅವನೊಡನೆ ಬಲವಾದ ಸೈನ್ಯವಿತ್ತು. ದಾವೀದನು ಜೆರುಸಲೇಮಿನಲ್ಲೇ ಇದ್ದನು. ಯೋವಾಬನು ರಬ್ಬ ಪಟ್ಟಣವನ್ನು ಸ್ವಾಧೀನ ಮಾಡಿಕೊಂಡು ಅದನ್ನು ಹಾಳುಮಾಡಿಬಿಟ್ಟನು.
2ದಾವೀದನು ಮಲ್ಕಾಮ ಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು; ಅದು ಸುಮಾರು ಮೂವತ್ತೈದು ಕಿಲೋಗ್ರಾಂ ತೂಕದ್ದು. ಅದರಲ್ಲಿ ಇದ್ದ ರತ್ನವನ್ನು ದಾವೀದನು ತನ್ನ ಶಿರಸ್ಸಿನಲ್ಲಿ ಧರಿಸಿಕೊಂಡನು. ಆ ಪಟ್ಟಣದಿಂದ ಅವನು ದೊಡ್ಡ ಕೊಳ್ಳೆಯನ್ನೇ ಕೊಂಡು ಹೊಯ್ದನು.
3ಊರಿನ ನಿವಾಸಿಗಳನ್ನು ಹಿಡಿದು ಗರಗಸ, ಗುದ್ದಲಿ, ಕೊಡಲಿಗಳಿಂದ ಕೆಲಸ ಮಾಡುವುದಕ್ಕೆ ಹಚ್ಚಿದನು. ಅಮ್ಮೋನಿಯರ ಉಳಿದೆಲ್ಲ ಪಟ್ಟಣದವರೆಗೂ ಇದೇ ಗತಿಯಾಯಿತು. ಅನಂತರ ದಾವೀದನು ಎಲ್ಲಾ ಸೈನಿಕರೊಡನೆ ಜೆರುಸಲೇಮಿಗೆ ಮರಳಿದನು.
4ಬಳಿಕ ಫಿಲಿಷ್ಟಿಯರ ವಿರುದ್ಧ ಗೆಜೆರಿನಲ್ಲಿ ಯುದ್ಧ ನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕೈ ಎಂಬವನು ರೆಫಾಯನಾದ ಸಿಪ್ಪೈ ಎಂಬವನನ್ನು ಕೊಂದನು. ಫಿಲಿಷ್ಟಿಯರು ಇದರಿಂದ ಕುಗ್ಗಿಹೋದರು.
5ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಯಾಯೀರನ ಮಗ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನ ತಮ್ಮ ಲಹ್ಮೀಯನನ್ನು ಕೊಂದನು. ಈ ಲಹ್ಮೀಯನ ಬರ್ಜಿಯ ಹಿಡಿಕೆ ನೇಕಾರರ ಕುಂಟೆಯಷ್ಟು ದೊಡ್ಡದಾಗಿತ್ತು.
6ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧ ನಡೆಯಿತು. ಅಲ್ಲಿ ಒಬ್ಬ ಎತ್ತರದ ಪುರುಷ ಇದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ, ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳು ಇದ್ದವು. ಅವನೂ ರೆಫಾಯನು.
7ಅವನು ಇಸ್ರಯೇಲರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು.
8ಗತ್ ಊರಿನವರಾದ ಈ ರೆಫಾಯರು ದಾವೀದನಿಂದಲೂ ಅವನ ಸೇವಕನಿಂದಲೂ ಹತರಾದರು.